ಉಡುಪಿ ಚಿನ್ನದ ಅಂಗಡಿ ದರೋಡೆ ಪ್ರಕರಣ : ಐವರು ಅಂತರರಾಜ್ಯ ಕಳ್ಳರ ಬಂಧನ
ಉಡುಪಿ: ಉಡುಪಿ ನಗರದ ಚಿನ್ನದ ಅಂಗಡಿಯಲ್ಲಿ ನಡೆದ ಭಾರೀ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಗ್ಯಾಂಗ್ನ ಐವರು ಆರೋಪಿಗಳನ್ನು ಪೊಲೀಸರು ಮಹಾರಾಷ್ಟ್ರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರನ್ನು ಶುಭಂ ತಾನಾಜಿ ಸಾಥೆ (25), ಪ್ರವೀಣ ಅಪ್ಪ ಸಾಥೆ (23), ನಿಲೇಶ್ ಬಾಪು ಕಸ್ತೂರಿ (19), ಸಾಗರ ದತ್ತಾತ್ರೇಯ ಕಂಡಗಾಲೆ (32), ಬಾಗವ ರೋಹಿತ್ ಶ್ರೀಮಂತ್ (25) ಎಂದು ಗುರುತಿಸಲಾಗಿದೆ. ಬಂಧಿತರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರೋಸ್ ತಾಲೂಕಿನ ನಿವಾಸಿಗಳು
ಸೆಪ್ಟೆಂಬರ್ 8ರ ರಾತ್ರಿ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಂಗಡಿ ಮಾಲೀಕ ವೈಭವ್ ಮೋಹನ್ ಘಾಟಗೆ, ಮುಂದಿನ ದಿನ ಬೆಳಗ್ಗೆ ಅಂಗಡಿಗೆ ಹೋದಾಗ ಶಟರ್ ಬೀಗ ಮುರಿಯದೆ ಕೀ ಬಳಸಿ ತೆಗೆಯಲ್ಪಟ್ಟಿದ್ದು, ಸುಮಾರು ₹95.71 ಲಕ್ಷ ಮೌಲ್ಯದ ಚಿನ್ನಾಭರಣಗಳು ದೋಚಲ್ಪಟ್ಟಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ. ಬಡಿಗೇರ ಅವರ ನೇತೃತ್ವದಲ್ಲಿ ಉಡುಪಿ, ಕಾಫು, ಕೊಲ್ಲೂರು ಹಾಗೂ ಮಣಿಪಾಲ ಠಾಣೆಗಳ ಸಿಬ್ಬಂದಿಗಳು, ಮಹಾರಾಷ್ಟ್ರ ಅಕ್ಲೂಜ್ ಠಾಣಾ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಸೆಪ್ಟೆಂಬರ್ 12ರಂದು ಸೋಲಾಪುರ ಜಿಲ್ಲೆಯ ಮಲ್ಶಿರೋಸ್ ತಾಲೂಕು ನಿಮ್ಗಾಂವ್ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 748.8 ಗ್ರಾಂ ಚಿನ್ನ (₹74.88 ಲಕ್ಷ), 4.445 ಕೆಜಿ ಬೆಳ್ಳಿ (₹3.60 ಲಕ್ಷ), ನಗದು ₹5 ಲಕ್ಷ, ಮಾರುತಿ ಸ್ವಿಫ್ಟ್ ಕಾರು (₹4 ಲಕ್ಷ) ವಶಪಡಿಸಿಕೊಳ್ಳಲಾಗಿದ್ದು ಇದರ ಒಟ್ಟು ಮೌಲ್ಯ ₹87.48 ಲಕ್ಷ ಆಗಿರುತ್ತದೆ.