ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಲು ಆಗ್ರಹಿಸಿ ದ.ಕ ಜಿಲ್ಲಾದ್ಯಂತ ಯುವಜನ ಜಾಥಾ
ಮಂಗಳೂರು: ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಲು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ದ. ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೆ.7ರಿಂದ 9 ರವರೆಗೆ ದ.ಕ ಜಿಲ್ಲಾದ್ಯಂತ ಯುವಜನ ಜಾಥಾ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ಮಿಯಾಝ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸೆ. 7ರಂದು ಬೆಳಗ್ಗೆ 9:30ಕ್ಕೆ ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ಜಾಥಾಕ್ಕೆ ಚಾಲನೆ ದೊರೆಯಲಿದೆ. ಅನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಾಥಾ ಸಂಚರಿಸಲಿದೆ. ಸೆ.9ರಂದು ಸಂಜೆ 4ಕ್ಕೆ ಮಂಗಳೂರಿನಲ್ಲಿ ಸಮಾರೋಪ ನಡೆಯಲಿದ್ದು, ಸಾರ್ವಜನಿಕ ಸಭೆಯ ಮುನ್ನ ಡಾ ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಯುವಜನರ ಬೃಹತ್ ಮೆರವಣೆಗೆ ನಡೆಯಲಿರು ವುದು ಎಂದು ವಿವರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ರಂಗಕರ್ಮಿ ಸತೀಶ್ ಶೆಟ್ಟಿ ಹಿರಿಯಡ್ಕ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಲವಿತ್ರ ವಸ್ತದ್ ಭಾವಹಿಸಲಿದ್ದಾರೆ ಎಂದರು.
ಪ್ರತೀ ಕುಟುಂಬದಲ್ಲೂ ಕನಿಷ್ಠ ಒಬ್ಬ ನಿರುದ್ಯೋಗಿ ಇದ್ದಾನೆ ಎನ್ನುವಷ್ಟು ಮಟ್ಟಿಗೆ ನಿರುದ್ಯೋಗ ಸಮಸ್ಯೆ ಬೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲೆಡೆ ಹತಾಶ ನಿರುದ್ಯೋಗಿಗಳ ದಂಡೇ ಕಂಡು ಬರುತ್ತಿದೆ. ಇಲ್ಲಿರುವ ನೂರಾರೂ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದಿ ಸರ್ಟಿಫಿಕೇಟ್ ಪಡೆದು ಹೊರಬರುತ್ತಿದ್ದರೂ ಅವರಿಗೆ ಅರ್ಹವಾದ ಶೇ. 5ರಷ್ಟು ಉದ್ಯೋಗಗಳು ಅವಿಭಜಿತ ದ.ಕ ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿಲ್ಲ. ಇಲ್ಲಿನ ವೃತ್ತಿಪರ ಶಿಕ್ಷಣ ಸಂಸ್ಥೆಗಳು ದುಬಾರಿ ದರ ಪಡೆದು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ ಎಂದು ಹೇಳಿದರು.
ಕೇಂದ್ರ ಸರಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಈಡೇರಿಸದೆ ಇರುವ ಉದ್ಯೋಗ ಗಳನ್ನು ಕಳೆದುಕೊಳ್ಳುವಂತಹ ತಪ್ಪಾದ ನೀತಿಗಳನ್ನು ಜಾರಿಗೊಳಿಸಿ ಇರುವ ಉದ್ಯೋಗಾವಕಾಶಗಳನ್ನು ನಾಶಪಡಿ ಸುತ್ತಿವೆ. ಕರ್ನಾಟಕದ ಸರಕಾರಿ ಇಲಾಖೆಗಳಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಭರ್ತಿ ಯಾಗದೆ ಖಾಲಿ ಬಿದ್ದಿವೆ ಎಂದು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದರೂ ಉದ್ಯೋಗ ಸೃಷ್ಟಿಸುವಲ್ಲಿ ಅವುಗಳು ಹಿಂದೆ ಬಿದ್ದಿವೆ. ಇರುವ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿಗಳೆಂಬ ಅರೆ ಸಂಬಳದ, ಉದ್ಯೋಗ ಭದ್ರತೆ ಇಲ್ಲದ ಆಧುನಿಕ ಜೀತ ಪದ್ಧತಿಗಳು ಜಿಲ್ಲೆಯ ಉದ್ಯಮಗಳಲ್ಲಿ ವಿಜೃಂಭಿಸುತ್ತಿವೆ. ಕರಾವಳಿಯ ಮತ್ರೋದ್ಯಮ, ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ರಬ್ಬರ್ ಕೃಷಿಗಳಿಂದ ಉದ್ಯೋಗ ಸೃಷ್ಟಿಯಾಗುವ ಉದ್ಯಮಗಳನ್ನು ಸ್ಥಾಪಿಸುವ ವ್ಯಾಪಕ ಅವಕಾಶಗಳು ಇದ್ದರೂ ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು, ಸರಕಾರ ಆಲೋಚನೆಯನ್ನೇ ಮಾಡಿಲ್ಲ ಎಂದು ದೂರಿದರು.