ಉರ್ವ ಮಾರುಕಟ್ಟೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಮಂಗಳೂರು: ಕಳೆದ ಸುಮಾರು ಆರು ವರ್ಷಗಳಿಂದ ಪಾಳು ಬಿದ್ದಿರುವ ಉರ್ವ ಮಾರುಕಟ್ಟೆ ಕಟ್ಟಡಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಅಗತ್ಯ ಮಾರ್ಪಾಡುಗಳೊಂದಗೆ ವ್ಯಾಪಾರಸ್ಥರಿಗೆ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚಿಸಿದರು.

ಮಳಿಗೆಗಳಲ್ಲಿ ವ್ಯಾಪಾರಸ್ಥರು ವ್ಯಾಪಾರಕ್ಕೆ ಬರುವಂತಾಗಲು ಅಗತ್ಯ ವ್ಯವಸ್ಥೆಗಳನ್ನು ರೂಪಿಸುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಾರುಕಟ್ಟೆಯನ್ನು ಅವೈಜಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ವ್ಯಾಪರಸ್ಥರ ಜತೆ ಚರ್ಚಿಸಿ ಅವರ ಅಗತ್ಯ ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
2019ರಲ್ಲಿ ಮುಡಾದಿಂದ ಸುಮಾರು 14 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಪಾಲಿಕೆಗೆ ಹಸ್ತಾಂತರಗೊಂಡಿದೆ. 7 ಕೋ.ರೂ ಗಳನ್ನು ಪಾಲಿಕೆಯವರು ಪಾವತಿಸಿದ್ದಾರೆ. ಇನ್ನೂ ಸುಮಾರು 7 ಕೋ.ರೂ. ಪಾವತಿಗೆ ಬಾಕಿ ಇದೆ. ಒಳಭಾಗದಲ್ಲಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ಕೆಲವು ವಿನ್ಯಾಸವನ್ನು ಮಾರ್ಪಡಿಸಲು ಸೂಚಿಸಲಾಗಿದೆ. ಹೊಸ ಮಾರ್ಕೆಟ್ ಕಟ್ಟಡಕ್ಕೆ ಬರಲು ವ್ಯಾಪಾರಿಗಳು ಸಿದ್ದರಿದ್ದಾರೆ. ಆದರೆ ಅವರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ಅವರಿಗೆ ಬೇಕಾದಂತೆ ಒಳಗಿನ ವಿನ್ಯಾಸಗಳನ್ನು ಬದಲಾವಣೆ ಮಾಡಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಇದಕ್ಕೆ ಅಂದಾಜು 2ರಿಂದ 3 ಕೋ.ರೂ. ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.
ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಾಲಿಕೆ ಆಯುಕ್ತ ರವಿಚಂದ್ರ ನಾಯ್ಕ್, ಮೂಡಾ ಆಯುಕ್ತ ನಜೀರ್, ಮನಪಾ ಮಾಜಿ ಸದಸ್ಯರಾದ ಅನಿಲ್ ಕುಮಾರ್, ಎ.ಸಿ.ವಿನಯರಾಜ್ ಮೊದಲಾದವರು ಉಪಸ್ಥಿತರಿದ್ದರು.












