ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ
ಮಂಗಳೂರು: ಹೊಟ್ಟೆ ತುಂಬಾ ತಿಂದು ಕುಳಿತಲ್ಲೇ ನಿದ್ದೆಗೆ ಜಾರಿದವರನ್ನು ನೋಡಿರಬಹುದು. ಆದರೆ ಇನ್ನೊಬ್ಬರ ಮನೆಯಲ್ಲಿ ಕಳ್ಳತನ ಮಾಡುಲು ಹೋಗಿ ನಿದ್ದೆಗೆ ಜಾರಿದ್ದನ್ನು ಕೇಳಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು, ಆರೋಪಿ ಮನೆ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಿಹಾರದ ಮಜೀಪುರ್ ಜಿಲ್ಲೆಯ ಅನಿಲ್ ಸಹಾನಿ (34) ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದ ಆರೋಪಿ. ಉಪ್ಪಿನಂಗಡಿಯ ಸುದರ್ಶನ್ ಎಂಬವರ ಮನೆಗೆ ಅನಿಲ್ ಸಹಾನಿ ಮಂಗಳವಾರ ಮಧ್ಯರಾತ್ರಿ ನುಗ್ಗಿದ್ದ. ಮನೆಯ ಹಂಚು ತೆಗೆದು ಒಳನುಗ್ಗಿದ್ದ ಅನಿಲ್ ಮನೆ ಛಾವಣಿಯ ದಿವಾನದಲ್ಲಿ ಮಲಗಿ ನಿದ್ದೆಗೆ ಜಾರಿದ್ದ.
ಬುಧವಾರ ಬೆಳಗ್ಗೆ ಎದ್ದ ಸುದರ್ಶನ್ ಅವರು ದಿವಾನದಲ್ಲಿ ಮಲಗಿದ್ದ ಅನಿಲ್ನನ್ನು ಕಂಡು ಗಾಬರಿಗೊಂಡಿದ್ದರು. ಬಳಿಕ ಎರಡೇಟು ಬಿಗಿದಾಗ ನಿಜ ಬಾಯಿಬಿಟ್ಟ ಆರೋಪಿಯನ್ನು ಸುದರ್ಶನ್ ಅವರು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಅನಿಲ್ ಸಹಾನಿ ಬೀಗದ ಕೀಲಿಕೈ ಹಿಡಿದುಕೊಂಡೇ ಮಲಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.













