ಕಾಂಗ್ರೆಸ್ ಮುಖಂಡರಿಂದ ಲೋಕಸಭಾ ಟಿಕೆಟ್ ಭರವಸೆ – ಸದಾನಂದ ಗೌಡ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ತಪ್ಪಿದೆ. ಪಕ್ಷದ ಈ ನಿರ್ಧಾರದಿಂದ ಡಿವಿ ಸದಾನಂದಗೌಡ ಅವರು ಬೇಸರಗೊಂಡಿದ್ದಾರೆ. ಅಲ್ಲದೆ ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಡಿವಿ ಸದಾನಂದಗೌಡ ಅವರನ್ನು ಸಂಪರ್ಕಿಸುತ್ತಿದ್ದು, ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಬೇರೆ ಬೇರೆ ಸಂಗತಿಗಳು ನಡೀತಿವೆ ಎಂದರು.
ನಿನ್ನೆ (ಮಾ.17) ರಂದು ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು, ಸಾಂತ್ವನ ಮಾಡಿರುವುದು ನಿಜ. ಮುಂದಿನ ನಿರ್ಧಾರ ನನ್ನ ಕುಟುಂಬಸ್ಥರ ಜತೆ ಚರ್ಚಿಸಬೇಕು. ದೆಹಲಿಯಲ್ಲಿ, ರಾಜ್ಯದಲ್ಲಿ ಒಂದಷ್ಟು ವಿದ್ಯಮಾನ ನಡೆದಿವೆ. ನಿಮಗೆ ಟಿಕೆಟ್ ಅಂದರು, ಕೊನೆ ಕ್ಷಣದಲ್ಲಿ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರವನ್ನ ಹೇಳಿಕೊಳ್ಳಬೇಕಿದೆ. ಇವತ್ತು ನನ್ನ ಜನ್ಮದಿನ, ಇಡೀ ದಿನ ಕುಟುಂಬದ ಸದಸ್ಯರ ಜತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ. ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜತೆ ಚರ್ಚಿಸಬೇಕು. ನನ್ನ ನಿರ್ಣಯ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದು ತಿಳಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪಿರುವ ಹಿನ್ನಲೆಯಲ್ಲಿ ಡಿ ವಿ ಸದಾನಂದ ಗೌಡ ರಾಜ್ಯದ ಉಡುಪಿ ಚಿಕ್ಕಮಗಳೂರು /ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
2009 ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಡಿ ವಿ ಸದಾನಂದ ಗೌಡಉಡುಪಿ ಸಂಸದರಾಗಿದ್ದಾಗಲೇ ಸಿಎಂ ಆಗುವ ಅವಕಾಶ ಒಲಿದಿತ್ತು. ಡಿವಿ ಯಿಂದ ತೆರವಾದ ಸ್ಥಾನಕ್ಕೆ 2012 ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು ಉಂಟಾಗಿದ್ದು ಸದ್ಯ ಡಿ ವಿ ಸದಾನಂದ ಗೌಡ ಜೊತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.
ರಾಜಕೀಯ ನಡೆಯ ನಿರ್ಧಾರ ಶೀಘ್ರ ಪ್ರಕಟಿಸುವುದಾಗಿ ಹೇಳಿರುವ ಸದಾನಂದ ಗೌಡ ಅವರಿಗೆಈ ಹಿಂದೆ ಗೆದ್ದ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಡಿವಿ ಸದಾನಂದ ಗೌಡಗೆ ಕಾಂಗ್ರೆಸ್ ಪಕ್ಷ ಅವಕಾಶ ಕೊಡುವುದೇ ಅಥವಾ ಮೈಸೂರು ಒಡೆಯರ್ ವಿರುದ್ಧ ಮಾಜಿ ಮುಖ್ಯಮಂತ್ರಿಗಳನ್ನು ಕಣಕ್ಕಿಳಿಸುವ ಚಿಂತನೆ ಕೂಡ ಇದೆ ಎನ್ನಲಾಗಿದೆ.
ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ ತಿಳಿದು ತಿಳಿದು ಹೀಗೆ ಮಾಡಿರುವುದು ಬೇಜಾರು ತಂದಿದೆ. ಬಿ.ವೈ.ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕೆ.ಎಸ್.ಈಶ್ವರಪ್ಪ ನಿರ್ಧರಿಸಿರುವ ಕುರಿತು ಮಾತನಾಡಿದ ಅವರು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿಯಾಗಿ ಮಾತನಾಡಿದ್ದೇನೆ. ಪಕ್ಷದಲ್ಲಿ ಯಾರಿಗೆಲ್ಲಾ ಮನಸ್ಸಿಗೆ ನೋವಾಗಿದೆಯೋ, ಒಟ್ಟಿಗೆ ಹೋಗಿ ವರಿಷ್ಠರ ಭೇಟಿಯಾಗಿ ತೀರ್ಮಾನಿಸೋಣ ಅಂದಿದ್ದೆ. ಆದರೆ ಈಶ್ವರಪ್ಪ ತಮ್ಮದೇ ಆದ ನಿರ್ಣಯ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.
ಹುಟ್ಟ ಹಬ್ಬದ ನಿಮಿತ್ಯ ಸದಾನಂದಗೌಡ ಅವರ ನಿವಾಸಕ್ಕೆ ಸೋಮವಾರ ನೂರಾರು ಬೆಂಬಲಿಗರು ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಅವರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಕೂಡ ಒಬ್ಬರು. ಅಭಿನಂದನೆ ಸ್ವೀಕರಿಸಿದ ಗೌಡರು ಮುಂದಿನ ಕ್ರಮದ ಬಗ್ಗೆ ಮಂಗಳವಾರ ನಿರ್ಧರಿಸುವುದಾಗಿ ತಿಳಿಸಿದರು.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನೀಡಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಅನ್ನು ಎಂಎಲ್ಸಿ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ನೀಡಲಾಗಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅಸಮಾಧಾನಗೊಂಡಿದ್ದಾರೆ.













