ಕೊಂಕಣಿ ಸಾಹಿತ್ಯ ಕಾರ್ಯಾಗಾರದಿಂದ ಹೊಸ ಸಾಹಿತಿಗಳು ಹುಟ್ಟಿಕೊಳ್ಳಲಿ – ವಂ| ಗ್ರೆಗೋರಿ ಡಿ’ಸೋಜಾ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ.ಸಿ.ವೈ.ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಮೂಡುಬಿದರೆಯ ಹೊಸ್ಪೆಟ್ ಚರ್ಚ್ನ ಸಭಾಂಗಣದಲ್ಲಿ 20.07.2025ರಂದು ಕೊಂಕಣಿ ಸಾಹಿತ್ಯ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದ ಆರಂಭದಲ್ಲಿ ಹೊಸ್ಪೆಟ್ ಚರ್ಚ್ನ ಧರ್ಮಗುರುಗಳಾದ ಅ|ವಂ| ಗ್ರೆಗೊರಿ ಡಿಸೋಜರವರು ಅಕಾಡೆಮಿಯು ಇಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ಹೊಸ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದೆ. ಭಾಗವಹಿಸಿದವರಲ್ಲಿ ಸಾಹಿತಿಗಳು ಹುಟ್ಟಿಕೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಾಗಾರದಲ್ಲಿ ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಬಗ್ಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ತಂಡಗಳನ್ನು ಮಾಡಿ ಶಿಬಿರಾರ್ಥಿಗಳಿಗೆ ಕವನವನ್ನು ರಚಿಸಲು ಅವಕಾಶ ಮಾಡಿಕೊಟ್ಟರು. ರೊನಿ ಕ್ರಾಸ್ತಾ ಕೆಲರಾಯ್ ಹಾಗೂ ವಿನೋದ್ ಪಿಂಟೊ ತಾಕೊಡೆ ಸಹಾಯ ಮಾಡಿದರು. ಕಾರ್ಯಾಗಾರದ ಶಿಬಿರಾರ್ಥಿಗಳು ಹುಮ್ಮಸ್ಸಿನಿಂದ, ಸುಂದರವಾದ ಕವಿತೆಗಳನ್ನು ರಚಿಸಿ, ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದರು.
ಶ್ರೀ ರೊನಿ ಕ್ರಾಸ್ತಾ, ಕೆಲರಾಯ್ ಇವರು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ, ಹಾಗೂ ಡಾ| ಜೊಯರ್ ರುಡೋಲ್ಪ್ ನೊರೊನ್ಹಾರವರು ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಉಪನ್ಯಾಸವನ್ನು ನೀಡಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಅಧ್ಯಕ್ಷತೆಯನ್ನು ವಹಿಸಿ, ʼಕೊಂಕಣಿ ಜನರಲ್ಲಿದ್ದಲ್ಲಿ ಅಕಾಡೆಮಿಯು ಬಂದು ಕೊಂಕಣಿ ಸಾಹಿತ್ಯ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವನ್ನು ನಡೆಸುತ್ತದೆ. ಜನರು ಇದರ ಪ್ರಯೋಜನವನ್ನು ಪಡೆಯಬೇಕು. ಕಾರ್ಯಕ್ರಮದ ಫಲವಾಗಿ ಒಬ್ಬರಾದರೂ ಕವಿ ಅಥವಾ ಕವಯಿತ್ರಿ ಉದಯಿಸಿದರೆ, ಅಕಾಡೆಮಿಯ ಪ್ರಯತ್ನವು ಫಲಿಸುತ್ತದೆʼ ಎಂದರು. ಕಾರ್ಯಗಾರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ಸಿ.ಎಸ್.ಸಿ.ಎ ಅಧ್ಯಕ್ಷರಾದ ವಿನೋದ್ ಪಿಂಟೊ, ಐ.ಸಿ.ವೈ.ಎಮ್ ಅಧ್ಯಕ್ಷರಾದ ರೊಲ್ಸ್ಟನ್ ಫ್ಲೆಮಿಂಗ್ ಡಿಸೋಜ, ಐ.ಸಿ.ವೈ.ಎಮ್ ಸಂಘಟನೆಯ ಪ್ರೇರಕರಾದ ಸೆಲ್ವಿನ್ ಜ್ಯೂಡ್ ಕುಲಾಸೊ ಹಾಗೂ ಡೆನಿಸ್ ಫೆರ್ನಾಂಡಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆನರಾ ಸ್ಪೋರ್ಟ್ ಮತ್ತು ಕಲ್ಚರಲ್ ಎಸೋಸಿಯೇಶನ್ರವರು ಈ ಕಾರ್ಯಾಗಾರಕ್ಕೆ ಸಹಕಾರ ನೀಡಿದ್ದರು.