ಕೊಡಗಿನ ವಿರಾಜಪೇಟೆ ಹೋಂಸ್ಟೇನಲ್ಲಿ ರೇವ್​ ಪಾರ್ಟಿ: ಹೋಂಸ್ಟೇ ಮಾಲೀಕ ಸೇರಿ ಮೂವರ ಬಂಧನ

Spread the love

ಕೊಡಗಿನ ವಿರಾಜಪೇಟೆ ಹೋಂಸ್ಟೇನಲ್ಲಿ ರೇವ್​ ಪಾರ್ಟಿ: ಹೋಂಸ್ಟೇ ಮಾಲೀಕ ಸೇರಿ ಮೂವರ ಬಂಧನ

ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಲ್ಲೂರಿನ ಹೋಂಸ್ಟೇ ಮೇಲೆ ದಾಳಿ ನಡೆಸಿರುವ ಪೊಲೀಸರು ರೇವ್​ ಪಾರ್ಟಿಯಲ್ಲಿ ತೊಡಗಿದ್ದ ಇಬ್ಬರು ಯುವಕರು ಸೇರಿ ಮೂವರನ್ನು ಬಂಧಿಸಿದ್ದಾರೆ.

ಹೋಂಸ್ಟೇ ಮಾಲೀಕ ವಿವೇಕ್​ (45), ಹೈದರಾಬಾದ್​ ಮೂಲದ ಎಲ್​. ನಿತೀಶ್​ (23) ಮತ್ತು ಬಿ. ಭರತ್​ (22) ಬಂಧಿತರು. ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್​ನ ಯುವಕ ಮತ್ತು ಯುವತಿಯರ ತಂಡದೊಂದಿಗೆ ಹೋಂಸ್ಟೇಗೆ ಆಗಮಿಸಿ ಇವರೆಲ್ಲರೂ ರೇವ್​ ಪಾರ್ಟಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಹೋಂಸ್ಟೇನಲ್ಲಿ ರೇವ್​ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ರೇವ್​ ಪಾರ್ಟಿ ಮಾಡುತ್ತಿದ್ದವರ ಬಳಿಯಿಂದ 65 ಗ್ರಾಂ ಗಾಂಜಾ, ರೇವ್​ ಪಾರ್ಟಿಯ ಪ್ರವೇಶ ಶುಲ್ಕವಾಗಿ ಸಂಗ್ರಹಿಸಲಾಗಿದ್ದ 85 ಸಾವಿರ ರೂ. ನಗದು, 21 ಮದ್ಯದ ಬಾಟಲಿಗಳು, ಸೌಂಡ್​ ಸಿಸ್ಟಂ ಅನ್ನು ವಶಪಡಿಸಿಕೊಂಡರು. ಸಾಮಾಜಿಕ ಜಾಲತಾಣ ವಾಟ್ಸ್​ಆ್ಯಪ್​ ಮೂಲಕ ಗ್ರೂಪ್​ ರಚಿಸಿಕೊಂಡು ರೇವ್​ ಪಾರ್ಟಿ ಕುರಿತು ಪ್ರಚಾರ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪೊನ್ನಂಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love