ಕೊಲ್ಲೂರು: ಮೂಕಾಂಬಿಕೆ ಸನ್ನಿಧಾನದಲ್ಲಿ ಅಬ್ಬರದ ಹುಲಿವೇಷ ಸೇವೆಗೆ ಮನಸೋತ ಭಕ್ತರು
ಕುಂದಾಪುರ: ದೊಡ್ಡ ಹುಲಿ, ಚಿಟ್ಟೆ ಹುಲಿ, ಮರಿ ಹುಲಿ, ಮರದ ಕಾಲಿನ ಹುಲಿ ಸೇರಿದಂತೆ ಎಲ್ಲೆಲ್ಲೂ ಹುಲಿವೇಷಧಾರಿಗಳೇ. ಒಂದೇ ಬಾರಿಗೆ ಎಂಟ್ರಿ ಕೊಟ್ಟ ಹುಲಿಗಳನ್ನು ಕಂಡು ಆಶ್ಚರ್ಯಚಕಿತರಾದ ಒಂದಷ್ಟು ಮಂದಿ ತಡ ಮಾಡದೆ ತಮ್ಮ ಮೊಬೈಲ್ ಗಳಲ್ಲಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯಲು ಆರಂಭಿಸಿದ್ದರು. ಪ್ರಾಂಗಣದ ಒಳಭಾಗದಲ್ಲಿ ಇದ್ದ ನೂರಾರು ಮಂದಿ ಹುಲಿವೇಷಧಾರಿಗಳು ಏನು ಮಾಡುತ್ತಾರೆ ಎನ್ನುವ ಕಾತರ ಕ್ಷಣಕ್ಕಾಗಿ ಕಾಯುತ್ತಿದ್ದರು…….ಇದೆಲ್ಲ ಕಂಡು ಬಂದದ್ದು, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ.

ಕಳೆದ ನೂರಾರು ವರ್ಷಗಳಿಂದ ಕೊಲ್ಲೂರಿನಲ್ಲಿ ನಡೆಯುತ್ತಿದ್ದ ಪಾರಂಪರಿಕ ದಸರಾ ಉತ್ಸವದ ವಿಜಯದಶಮಿಯ ಆಚರಣೆಗೆ ಕಳೆದ ವರ್ಷದಿಂದ ಹುಲಿವೇಷದ ಕುಣಿತ ಸೇವೆಯೂ ಜೊತೆಯಾಗಿರುವುದರಿಂದ ಉತ್ಸವಕ್ಕೆ ಬರುವ ಸಾವಿರಾರು ಜನರು ಹುಲಿವೇಷಧಾರಿಗಳ ನರ್ತನಕ್ಕೂ ಕ್ಷಣ ಗಣನೆ ಮಾಡುತ್ತಾ ಕಾಯುತ್ತಿರುತ್ತಾರೆ. ಕೊಲ್ಲೂರಿನಲ್ಲಿಯೇ ಬಣ್ಣತೊಟ್ಟು ಮೆರವಣಿಗೆಯಲ್ಲಿ ಸಾಗಿ ಬರುವ ಜಿಲ್ಲೆಯ ಪ್ರಸಿದ್ಧ ಹುಲಿ ವೇಷಧಾರಿಗಳ ತಂಡವಾದ ಮಲ್ಪೆ ಕೊಳ ಫ್ರೆಂಡ್ಸ್ ತಂಡದ ಸದಸ್ಯರು ದೇವಸ್ಥಾನದ ಮುಂಭಾಗದಲ್ಲಿ ಧೂಪ ಸೇವೆ ಮಾಡಿದ ಬಳಿಕ ಧ್ವಜ ಸ್ತಂಭದ ಎದುರು ಹುಲಿವೇಷಧಾರಿಗಳು ನರ್ತನ ಸೇವೆ ನಡೆಸುತ್ತಾರೆ.

ದೇವಸ್ಥಾನದ ಧ್ವಜ ಸ್ತಂಭದ ಎದುರು 35 ಕ್ಕಿಂತಲೂ ಅಧಿಕ ಹುಲಿವೇಷಧಾರಿಗಳು ನಡೆಸಿದ ಅಬ್ಬರದ ನರ್ತನ ಸೇವೆಯ ಸೊಬಗಿಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಹುಲಿವೇಷಧಾರಿಗಳ ನರ್ತನವನ್ನು ಕಣ್ ತುಂಬಿಕೊಂಡ ಭಕ್ತರು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಮರಿ ಹುಲಿಗಳು :
ಪರಂಪರೆಯನ್ನು ಮುಂದಿನ ಪೀಳಿಗೆಗೂ ಮುಂದುವರೆಸಬೇಕು ಎನ್ನುವ ಹಿರಿ ತಲೆಗಳು, ತಮ್ಮ ಮಕ್ಕಳಿಗೂ ವೇಷ ಹಾಕಿರುವುದು ಈ ಬಾರಿಯ ವಿಶೇಷ.ಮೂರು ವರ್ಷದ ಪುಟಾಣಿ ಶಾಸ್ತ್ರ ಜಿ ಸಾಲ್ಯಾನ್ ಹಾಗೂ ಅಪೇಕ್ಷಾ ಹುಲಿವೇಷದೊದಿಗೆ ಮರದ ಕಾಲುಗಳನ್ನು ಕಟ್ಟಿಕೊಂಡು ಗಮನ ಸೆಳೆದರು.

ಮರಿ ಹುಲಿಗಳಾದ ನಾಲ್ಕು ವರ್ಷದ ಹನಶ್ ಎಸ್ ಸಾಲ್ಯಾನ್ ಹಾಗೂ ಮೂರು ವರ್ಷದ ನಕ್ಷಾ ಯತೀಶ್ ಅವರ ಕುಣಿತಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಹುಲಿಗಳ ಆವೇಶ :
ಕೊಲ್ಲೂರಿನ ಮೂಕಾಂಬಿಕಾ ಸಭಾಭವನದಲ್ಲಿ ಹುಲಿವೇಷಧಾರಿಗಳಿಗೆ ಬಣ್ಣ ಹಚ್ಚುವ ಸಮಯದಲ್ಲಿ 3-4 ಜನರಿಗೆ ಹಾಗೂ ದೇವಾಲಯದಲ್ಲಿ ನರ್ತನ ಸೇವೆ ಸಲ್ಲಿಸುವಾಗ ಕೆಲ ವೇಷಧಾರಿಗಳಲ್ಲಿ ಆವೇಶಗಳು ಬಂದಿದ್ದವು. ಈ ವೇಳೆ ಮೂಕಾಂಬಿಕೆ ದೇವಿಯ ಸಿಂಧೂರಗಳನ್ನು ಹಣೆಗೆ ಹಚ್ಚಿ ಅವರ ಆವೇಶಗಳನ್ನು ಸಮಾಧಾನಗೊಳಿಸಲಾಗಿತ್ತು.

ಪೌರಾಣಿಕ ಹಿನ್ನೆಲೆಯ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕೆ ಸನ್ನಿದಾನದಲ್ಲಿ ನವರಾತ್ರಿ ವಿಶೇಷ ದಿನವಾದ ಇಂದು ಮಲ್ಪೆಯ ಕೊಳ ಫ್ರೆಂಡ್ಸ್ ತಂಡದವರಿಂದ ಪಾರಂಪರಿಕ ಶೈಲಿಯಲ್ಲಿ ನಡೆದ ಹುಲಿವೇಷದ ಕುಣಿತ ದೇವಿಯ ಉತ್ಸವದ ಸೊಬಗನ್ನು ಹೆಚ್ಚಿಸಿದೆ ಎಂದು ಬೈಂದೂರಿನ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು.

ಕೊಲ್ಲೂರಿನ ದಸರಾ ವೈಭವವನ್ನು ಹೆಚ್ಚಿಸಬೇಕು ಎನ್ನುವ ಕಾರಣದಿಂದ ದೇಗುಲದ ಸಹಕಾರದಿಂದ ಕಳೆದ ಎರಡು ವರ್ಷಗಳಿಂದ ಹುಲಿವೇಷ ನರ್ತನ ಸೇವೆ ಮಾಡುತ್ತಿದ್ದೇವೆ. ಇದಕ್ಕೆ ಶ್ರೀ ದೇವಿಯ ಭಕ್ತರದಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಸಂತೋಷ ತಂದಿದೆ ಎಂದು ಹುಲಿವೇಷ ಸಂಘಟಕ ಹರೀಶ್ ತೋಳಾರ್ ಹೇಳಿದರು.

ಜಗನ್ಮಾತೆ ಕೊಲ್ಲೂರಿನ ಮೂಕಾಂಬಿಕಾ ದೇವಿನ ಸನ್ನಿಧಾನದಲ್ಲಿ ಸೇವೆ ಸಲ್ಲಿಸಿದ ಬಳಿಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕುಣಿತ ಪ್ರದರ್ಶನ ನೀಡಬೇಕು ಎನ್ನುವುದು ನಮ್ಮ ಸಂಕಲ್ಪ. ಎರಡು ವರ್ಷಗಳಿಂದ ನಮ್ಮ ತಂಡದವರಿಂದ ಈ ಸೇವೆ ನಡೆಯುತ್ತಿದೆ ಎನ್ನುತ್ತಾರೆ ಹುಲಿವೇಷಧಾರಿ ಮಲ್ಪೆಯ ಗಣೇಶ್ ಸಾಲ್ಯಾನ್ .

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಹರೀಶ್ ತೋಳಾರ್ ಕೊಲ್ಲೂರು, ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ, ಹೋಂ ಗಾರ್ಡ್ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ತಾ.ಪಂ ಮಾಜಿ ಸದಸ್ಯರಾದ ರಮೇಶ್ ಗಾಣಿಗ, ಸದಾಶಿವ ಡಿ ಪಡುವರಿ, ಗ್ರೀಷ್ಮ ಭೀಡೆ, ಜಿಲ್ಲಾ ಬಿಜೆಪಿ ಮೋರ್ಚಾ ಉಪಾಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಪೂಜಾರಿ ಪಡುಕೋಣೆ, ಬೈಂದೂರು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಉಡುಪಿ ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ, ಕೊಳ ಫ್ರೆಂಡ್ಸ್ ನ ರವಿ ಸಾಲ್ಯಾನ್, ಗಣೇಶ್ ಸಾಲ್ಯಾನ್, ಮಂಜುನಾಥ ಕೊಳ, ಉದ್ಯಮಿ ವಿವೇಕ್ ಸುವರ್ಣ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ಗೋಪಾಲ ನಾಡ ಇದ್ದರು.












