ಕೋಟೇಶ್ವರದಿಂದ ಹೆಜಮಾಡಿಯವರೆಗೆ 26ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ : ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಕೆಲವು ಜೀವಹಾನಿ ಗಳಾದ ಬಳಿಕ ಜನರ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದೀಗ ಕೋಟೇಶ್ವರ ದಿಂದ ಪ್ರಾರಂಭಗೊಂಡು ಹೆಜಮಾಡಿವರೆಗೆ 26 ಕಿ.ಮೀ. ಸರ್ವಿಸ್ ರಸ್ತೆ ಹಾಗೂ ಮೂರು ಫುಟ್ ಓವರ್ಬ್ರಿಡ್ಜ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೆಲ ಸಮಯದ ಹಿಂದೆ ಬ್ರಹ್ಮಾವರದ ಶಾಲಾ ಪರಿಸರದಲ್ಲಿ ರಸ್ತೆ ದಾಟುತಿದ್ದ ಪುಟ್ಟ ಬಾಲಕ ವೇಗವಾಗಿ ಧಾವಿಸಿ ಬಂದ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಸಾರ್ವಜನಿಕರ ಪ್ರತಿಭಟನೆ ನಡೆದು ಸರ್ವಿಸ್ ರಸ್ತೆ ಹಾಗೂ ಫ್ಲೈಓವರ್ ನಿರ್ಮಾಣಕ್ಕೆ ಬಲವಾದ ಬೇಡಿಕೆಗಳನ್ನು ಮಂಡಿಸಲಾಗಿತ್ತು. ಆ ಬಳಿಕ ಜಿಲ್ಲೆಯ ಅನೇಕ ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಮಂಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿ-66ಕ್ಕೆ ಸಂಬಂಧಿಸಿದಂತೆ, ಕುಂದಾಪುರದಿಂದ ನಂತೂರು ವರೆಗಿನ ಭಾಗದಲ್ಲಿ 12 ಕಡೆಗಳಲ್ಲಿ ಸರ್ವಿಸ್ ರಸ್ತೆ ಹಾಗೂ ಒಟ್ಟು ಆರು ಕಡೆಗಳಲ್ಲಿ ಫುಟ್ಓವರ್ ಬ್ರಿಡ್ಜ್ಗಳ ನಿರ್ಮಾಣಕೆಕ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಸಂಸದ ಕೋಟ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸರ್ವಿಸ್ ರಸ್ತೆಗಳು:
- ಕೋಟೇಶ್ವರ ಬೈಪಾಸ್ನಿಂದ ಬ್ಯಾನ್ಸ್ ಗ್ರಾನೈಟ್ವರೆಗೆ ಮುಂದುವರೆದು ಬೀಜಾಡಿ ಕ್ರಾಸ್ವರೆಗೆ ಒಟ್ಟು 830ಮೀ.
- ಬೀಜಾಡಿಯಿಂದ ತೆಕ್ಕಟ್ಟೆ: ಅನ್ನಪೂರ್ಣ ಹೋಟೇಲ್ನಿಂದ ಸಾನ್ವಿ ಏಜೆನ್ಸಿ ಬೀಜಾಡಿ-ಕುಂಭಾಶಿ-ತೆಕ್ಕಟ್ಟೆವರೆಗೆ ಒಟ್ಟು 3.500ಕಿ.ಮೀ. ರಸ್ತೆಯ ಎರಡು ಕಡೆಗೆ
- ಸಾಲಿಗ್ರಾಮ: ತೆಕ್ಕಟ್ಟೆ ಸೇವಾಸಂಗಮ ಶಿಶು ಮಂದಿರದಿಂದ ಮುಂದುವರೆದು ಸಾಲಿಗ್ರಾಮದವರೆಗೆ ಒಟ್ಟು 1.020ಕಿ.ಮೀ. ರಸ್ತೆ ಎರಡು ಕಡೆಗೆ
- ಬ್ರಹ್ಮಾವರ: ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಮ್.ಎಸ್ ಜೂನಿಯರ್ ಕಾಲೇಜುವರೆಗೆ ಒಟ್ಟು 400ಮೀ. ರಸ್ತೆ ಎರಡು ಕಡೆಗೆ.
- ಅಂಬಾಗಿಲು: ಸಂತೆಕಟ್ಟೆಯ ಇಂದ್ರ ಸರ್ವಿಸ್ ಸ್ಟೇಷನ್ನಿಂದ ಮಂದಾರ ವುಡ್ ಇಂಡಸ್ಟ್ರೀಸ್ವರೆಗೆ ಒಟ್ಟು ಒಂದು ಕಿ.ಮೀ.. ರಸ್ತೆಯ ಎರಡು ಕಡೆಗೆ.
- ಬಲಾಯಿಪಾದೆ: ಉದ್ಯಾವರ ಜಂಕ್ಷನ್ನಿಂದ ದೇಶ್ನ ಬ್ಯಾಂಕಿನವರೆಗೆ ರಸ್ತೆಯ ಬಲಬದಿ ಮಾತ್ರ ಒಟ್ಟು 325ಮೀ.
- ಉದ್ಯಾವರ: ಬಲಾಯಿಪಾದೆಯಿಂದ ಉದ್ಯಾವರ ಕಿಯಾ ಶೋರೂಂ ವರೆಗೆ ಒಟ್ಟು 1.64ಕಿ.ಮೀ. ರಸ್ತೆಯ ಎರಡು ಕಡೆಗೆ.
- ಬಡಾ ಎರ್ಮಾಳ್:ಎರ್ಮಾಳ್ ಮಸೀದಿ ಹತ್ತಿರ ಒಟ್ಟು 2ಕಿ.ಮೀ. ರಸ್ತೆಯ ಎರಡು ಕಡೆಗೆ.
- ಹೆಜಮಾಡಿ: ಪಡುಬಿದ್ರಿಯ ಬೋಸ್ಕೋ ಕಂಪೆನಿಯಿಂದ ಕಣ್ಣಾಂಗರ್ ಬೇಕರಿ ಸಮೀಪದವರೆಗೆ ಒಟ್ಟು 750ಮೀ. ರಸೆಯ್ತ ಬಲಬದಿಗೆ ಮಾತ್ರ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವಿಸ್ ರಸ್ತೆ: *ಮುಲ್ಕಿಯಲ್ಲಿ 500ಮೀ, *ಪಡುಪಣಂಬೂರಿನಲ್ಲಿ 310ಮೀ., ಹಳೆಯಂಗಡಿಯಲ್ಲಿ 550ಮೀ. ಹಾಗೂ ಬೀರಿಯಲ್ಲಿ 700ಮೀ.
- ಹೊಸ ಫುಟ್ ಓವರ್ಬ್ರಿಡ್ಜ್ಗಳು: 1.ಮಹೇಶ್ ಆಸ್ಪತ್ರೆ ಎದುರು ಬ್ರಹ್ಮಾವರ, 2.ಉಡುಪಿಯ ನಿಟ್ಟೂರು, 3.ತೆಂಕ ಎರ್ಮಾಳ್, 4.ಬಪ್ಪನಾಡು ದೇವಸ್ಥಾನ ಮೂಲ್ಕಿ, 5.ಶ್ರೀನಿವಾಸ ಕಾಲೇಜು ಮುಕ್ಕ, 6.ಗೋರೆಗುಡ್ಡೆ.
ಈ ಎಲ್ಲಾ ಕಾಮಗಾರಿಗಳಿಗೆ ಸಾರಿಗೆ ಸಚಿವಾಲಯದ ಅನುಮೋದನೆ ದೊರೆತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಟಪಾಡಿಯಲ್ಲಿ ಓವರ್ಪಾಸ್
ಇದರೊಂದಿಗೆ ಕಟಪಾಡಿಯಲ್ಲಿ ಸುಮಾರು 500 ಮೀ. ಉದ್ದದ ವೆಹಿಕ್ಯುಲರ್ ಓವರ್ ಪಾಸ್ ನಿರ್ಮಾ ಣಕ್ಕೂ ಹೆದ್ದಾರಿ ಪ್ರಾಧಿಕಾರ ತನ್ನ ಅನುಮೋದನೆಯನ್ನು ನೀಡಿದೆ ಎಂದು ಸಂಸದರು ಹೇಳಿಕೆಯಲ್ಲಿ ತಿಳಿಸಿದ್ದಾರೆ.