ಕೋಳಿ ಅಂಕದ ಬಗ್ಗೆ ಪ್ರಸಾದ್ ಕಾಂಚನ್ ಅವಹೇಳನಕಾರಿ ಹೇಳಿಕೆ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವಿಗೆ ಸಾಕ್ಷಿ : ಬಾಲಕೃಷ್ಣ ಶೆಟ್ಟಿ
ಉಡುಪಿ: ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ತುಳುನಾಡಿನ ದೈವಾರಾಧನೆಯ ರಕ್ತಾಹಾರ ಕಲ್ಪನೆಯ ಭಾಗವಾಗಿರುವ ಕೋಳಿ ಅಂಕದ ಬಗ್ಗೆ ತೀರಾ ಅವಮಾನಕರ ರೀತಿಯಲ್ಲಿ ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಉಡುಪಿ ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ತುಳುನಾಡಿನ ಸಾಂಪ್ರದಾಯಿಕ ಆಚರಣೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಾಗ ಉಡುಪಿ ಜಿಲ್ಲೆಯ ಹಲವಾರು ದೈವಸ್ಥಾನ, ಗರೋಡಿ, ದೇವಸ್ಥಾನಗಳ ಉತ್ಸವದ ಬಳಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯ ಭಾಗವಾಗಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತಹ ಕೋಳಿ ಅಂಕಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡುವಂತೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ತುಳುನಾಡಿನ ಧಾರ್ಮಿಕ ಮುಖಂಡರ ಪ್ರತಿನಿಧಿಯಾಗಿ ಪ್ರಸ್ತಾಪಿಸಿದ್ದನ್ನು, ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಸ್ವಲ್ಪವೂ ಮಾಹಿತಿಯೇ ಇಲ್ಲದ ಪ್ರಸಾದ್ ಕಾಂಚನ್ ಇದು ಉಡುಪಿ ಜಿಲ್ಲೆಗೆ ಮಾಡಿದ ಅವಮಾನ ಎಂಬ ಅತ್ಯಂತ ಬಾಲಿಶ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋವುಗಳ ಕಳ್ಳತನ, ಅಕ್ರಮ ಕಸಾಯಿಖಾನೆ, ಗೋವಿನ ರುಂಡ ಎಸೆದ ಘಟನೆಗಳು ನಡೆದಾಗ ಯಾವತ್ತೂ ಖಂಡಿಸದ ಪ್ರಸಾದ್ ಕಾಂಚನ್ ತುಳುನಾಡಿನ ದೈವಾರಾಧನೆಯ ಬಗ್ಗೆ ಮಾತ್ರ ಸದಾ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ದುರ್ದೈವ.
ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಪೊಲೀಸ್ ಇಲಾಖೆಯಿಂದ ರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಅಡಚಣೆ, ಶಾಲಾ ಆವರಣದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನಿರಾಕರಣೆ, ಗಣೇಶೋತ್ಸವದ ಮೆರವಣಿಗೆಗೆ ಕಠಿಣ ನಿಯಮಗಳನ್ನು ಹೇರಿದಾಗಲೂ ಉಡುಪಿ ಶಾಸಕರು ಓರ್ವ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ, ಧಾರ್ಮಿಕ ಆಚರಣೆಗೆ ಧಕ್ಕೆ ಉಂಟುಮಾಡಿದ ಸರಕಾರದ ನಿಲುವನ್ನು ಸ್ಪಷ್ಟವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಉಡುಪಿಯ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಹೆಮ್ಮೆ ಇದೆ.
ಕನಿಷ್ಠ ಒಂದು ಬಾರಿ ಗ್ರಾಮ ಪಂಚಾಯತ್ ಸದಸ್ಯನಾಗಿಯೂ ಸೇವೆ ಮಾಡದ ಅನನುಭವಿ ಪ್ರಸಾದ್ ಕಾಂಚನ್ ಅವರಿಗೆ ಪ್ರಾಯಶಃ ಶಾಸಕರ ಕರ್ತವ್ಯ, ಕಾರ್ಯ ವ್ಯಾಪ್ತಿ, ಜವಾಬ್ದಾರಿಗಳ ಬಗ್ಗೆ ಮಾಹಿತಿ ಹಾಗೂ ಅನುಭವದ ಕೊರತೆ ಇದೆ ಎಂಬುದು ಪದೇ ಪದೇ ಅವರ ಹೇಳಿಕೆಗಳಿಂದ ಸಾಬೀತಾಗುತ್ತಿದೆ.
ಶಾಸಕರ ಬಳಿ ದಿನoಪ್ರತಿ ಕಾಂಗ್ರೆಸ್, ಬಿಜೆಪಿ ಸಹಿತ ನೂರಾರು ಮಂದಿ ಪಕ್ಷಾತೀತವಾಗಿ ತಮ್ಮ ದೈವಸ್ಥಾನ, ಗರೋಡಿ, ದೇವಸ್ಥಾನಗಳಿಂದ ವರ್ಷಂಪ್ರತಿ ಆಯೋಜಿಸುವ ಕೋಳಿ ಅಂಕಕ್ಕೆ ಅನುಮತಿ ಒದಗಿಸುವಂತೆ ಯಾವ ರೀತಿ ಮನವಿ ಮಾಡುತ್ತಾರೆ ಎಂಬುದನ್ನು ಪ್ರಸಾದ್ ಕಾಂಚನ್ ಒಮ್ಮೆ ಶಾಸಕರ ಕಚೇರಿಗೆ ಬಂದು ತಿಳಿದುಕೊಳ್ಳುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಶಾಸಕರು ವಿಧಾನ ಸಭೆಯಲ್ಲಿ ಕೋಳಿ ಅಂಕದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದಾಗ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಕೂಡಾ ಸಹಮತ ಸೂಚಿಸಿದ್ದರೂ, ಉಡುಪಿಯ ಪ್ರಸಾದ್ ಕಾಂಚನ್ ಮಾತ್ರ ಕೇವಲ ಶಾಸಕರನ್ನು ಟೀಕಿಸುವ ಏಕೈಕ ಉದ್ದೇಶದಿಂದ ಇಂತಹ ಅವಹೇಳಕಾರಿ ಹೇಳಿಕೆ ನೀಡುತ್ತಿರುವುದು ವಿಷಾದನೀಯ.
ಉಡುಪಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು ಕೋಳಿ ಅಂಕದ ಸಾಂಪ್ರದಾಯಿಕ ಹಿನ್ನೆಲೆ ತಿಳಿದವರಾಗಿದ್ದು, ಯಾರು ಕೂಡಾ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿಲ್ಲ. ಪ್ರಸಾದ್ ಕಾಂಚನ್ ಹೇಳಿಕೆಯ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ತಮ್ಮ ನಿಲುವನ್ನು ಕೊಡಲೇ ಸ್ಪಷ್ಟ ಪಡಿಸಬೇಕು ಹಾಗೂ ಪ್ರಸಾದ್ ಕಾಂಚನ್ ಕೂಡಲೇ ತನ್ನ ಬೇಜವಾಬ್ದಾರಿ ಹೇಳಿಕೆಗೆ ತುಳುನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಾಲಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.