ಗೌರಿ ಹಂತಕರಿಗೆ ಶಿಕ್ಷೆಯಾದರೆ ವಿಚಾರಾಧಾರೆಗಳಿಗಾಗಿ ನಡೆಯುವ ಹತ್ಯೆ ಕೊನೆಗೊಳ್ಳುತ್ತದೆ: ಚಿಂತಕ ಕೆ. ಫಣಿರಾಜ್
ಕುಂದಾಪುರ: ಗೌರಿ ಹತ್ಯೆ ಪ್ರಕರಣದ 17 ಆರೋಪಿಗಳು ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಈ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಿ ಆರೋಪಿಗಳಿಗೆ ಶಿಕ್ಷೆಯಾದರೆ ಇದೇ ರೀತಿ ನಂಬಿಕೆ, ವಿಚಾರಗಳಿಗಾಗಿ ಹತ್ಯೆಯಾದ 60ಕ್ಕೂ ಹೆಚ್ಚು ಪತ್ರಕರ್ತರಿಗೂ ನ್ಯಾಯ ಸಿಕ್ಕಂತಾಗುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾಗುವುದರಿಂದ ಈ ರೀತಿಯ ಪ್ರಕರಣಗಳು ಪುನರಾವರ್ತನೆ ಆಗೋದಿಲ್ಲ ಎಂದು ಪ್ರಗತಿಪರ ಚಿಂತಕ, ಸಹಬಾಳ್ವೆ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಫಣಿರಾಜ್ ಹೇಳಿದರು.
ಶುಕ್ರವಾರ ಇಲ್ಲಿನ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಬಳಿಯಲ್ಲಿ ಸಂಜೆ ಸಹಬಾಳ್ವೆ ಸಂಘಟನೆಯ ನೇತೃತ್ವದಲ್ಲಿ ನಡೆದ ಗೌರಿ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನ ಅನೇಕ ಕಡೆ ಸರ್ವಾಧಿಕಾರ ಇರುವ ರಾಷ್ಟ್ರಗಳಲ್ಲಿ ಹೆಚ್ಚಾಗಿ ಈ ರೀತಿಯ ದುರ್ಘಟನೆ ನಡೆದಿದೆ. ಆದರೆ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆದ ಈ ರೀತಿಯ 60 ಕ್ಕೂ ಮಿಕ್ಕಿ ಪ್ರಕರಣದಲ್ಲಿ ಕೇವಲ 13 ಪ್ರಕರಣದಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. ಕೊಲೆಯಾದ 5 ವರ್ಷಗಳ ನಂತರ ಗೌರಿ ಕೊಲೆಯ ವಿಚಾರಣೆ ಆರಂಭವಾಗಿದೆ. ತಿಂಗಳಲ್ಲಿ 2-3 ದಿನ ಮಾತ್ರ ವಿಚಾರಣೆ ನಡೆಯುತ್ತಿದ್ದೂ, ವಾರದಲ್ಲಿ 3 ದಿನ ಕೋರ್ಟ್ ಕಲಾಪ ನಡೆಯಬೇಕು ಎನ್ನುವ ಆಗ್ರಹ ಇದೆ. ತುರ್ತು ವಿಚಾರಣೆ ನಡೆದು ಆರೋಪಿಗಳಿಗೆ ಶೀಘ್ರವಾಗಿ ಶಿಕ್ಷೆ ದೊರಕಬೇಕು ಎನ್ನುವ ನಿರೀಕ್ಷೆ ನಮಗಿದೆ ಎಂದರು.
ಸಮುದಾಯ ಸಂಘಟನೆಯ ರಾಜ್ಯ ಜೊತೆ ಕಾರ್ಯದರ್ಶಿ ಉದಯ್ ಗಾಂವ್ಕರ್ ಮಾತನಾಡಿ, ವ್ಯಕ್ತಿಗತವಾದ ಭಿನ್ನಾಭಿಪ್ರಾಯ ಮನುಷ್ಯನ ಸಹಜ ಪ್ರವೃತ್ತಿ. ಅಭಿಪ್ರಾಯ ಭಿನ್ನತೆಗಳೇ ಕೊಲೆಯಲ್ಲಿ ಮುಕ್ತಾಯವಾಗುವುದು ನಾಗರಿಕ ಸಮಾಜಕ್ಕೆ ಎಂದೂ ಶೋಭೆ ತರೋದಿಲ್ಲ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ದಿನೇಶ್ ಶೆಟ್ಟಿ ಅವರು, ಗೌರಿ ತನ್ನ ಗಟ್ಟಿ ಚಿಂತನೆಗಳಿಗಾಗಿ ವೈಯಕ್ತಿಕವಾಗಿ ಸಾಕಷ್ಟು ವಿರೋಧ ಕಟ್ಟಿಕೊಂಡಿದ್ದರು. ಅವರಲ್ಲಿ ಮಾನವ ಹಾಗೂ ಮಹಿಳಾ ಹಕ್ಕುಗಳ ಕಾಳಜಿಯಿಂದಾಗಿ ಅವರು ಕರ್ನಾಟಕದ ಮಹಿಳೆಯರ ಹೆಮ್ಮೆಯ ಸಂಕೇತವಾಗಿದ್ದರು. ಅವರ ನೇರ-ನಡೆಗಳಿಂದಾಗಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರೂ, ಅವರೆಲ್ಲ ಅವರ ಸಿದ್ಧಾಂತಗಳನ್ನು ಎಂದೂ ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದೇನೂ ಇಲ್ಲ. ಪ್ರಸ್ತುತ ರಾಜಕಾರಣಕ್ಕೆ ಅವರು ಅಗತ್ಯವಾಗಿ ಬೇಕಿತ್ತು. ಗೌರಿ ದೇಹಕ್ಕೆ ಗುಂಡು ಹೊಡೆದಿರಬಹುದು, ಆದರೆ ಗೌರಿ ಎನ್ನುವ ಪ್ರಜ್ಞೆಗೆ ಹಾಗೂ ಸತ್ಯಕ್ಕೆ ಯಾವತ್ತೂ ಸಾವಿಲ್ಲ ಎಂದರು.
ನಿವೃತ್ತ ಉಪನ್ಯಾಸಕ ಪ್ರೊ.ಹಯವದನ ಉಪಾಧ್ಯಾಯ ಅವರು, ಸಾಮಾಜಿಕ ಹಾಗೂ ಸಮಾನತೆಯ ಸಂಕೇತವಾದ ಗೌರಿ ಲಂಕೇಶ್ ಅವರನ್ನು ಅವರ ವಿಚಾರಧಾರೆಗಾಗಿಯೇ ಕೊಲೆ ಮಾಡುವ ಹೀನ ಕೃತ್ಯಗಳು ಖಂಡನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಹಬಾಳ್ವೆ ಸಂಘಟನೆಯ ಅಧ್ಯಕ್ಷ ಎ.ರಾಮಕೃಷ್ಣ ಹೇರ್ಳೆ ಅವರು, ಗೌರಿ ಅವರು ಅಚಲವಾಗಿ ನಂಬಿಕೆ ಇರಿಸಿದ್ದ ಪ್ರಜಾಸತ್ತಾತ್ಮಕ ನಿಲುವುಗಳನ್ನು ಬೆಂಬಲಿಸಿ ಪಾಲಿಸುವುದೇ ನಿಜ ಅರ್ಥದಲ್ಲಿ ಗೌರಿ ಅಕ್ಕನಿಗೆ ನೀಡುವ ಗೌರವ ಎಂದರು.
ಜಿಲ್ಲಾ ದಸಂಸ ಮುಖಂಡ ಮಂಜುನಾಥ ಗಿಳಿಯಾರ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸತೀಶ್ ಕಿಣಿ ಬೆಳ್ವೆ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಅಬ್ಬು ಮಹಮ್ಮದ್, ಪ್ರಭಾವತಿ ಶೆಟ್ಟಿ, ಪ್ರಮುಖರಾದ ಅಶೋಕ ಸುವರ್ಣ, ಸದಾನಂದ ಖಾರ್ವಿ, ಶಶಿಧರ ಕೋಟೆ ನಂದಿಬೆಟ್ಟು, ಎಚ್.ನರಸಿಂಹ, ವಿ.ಚಂದ್ರಶೇಖರ, ರಾಜಾ ಬಿಟಿಆರ್, ರಾಜು ಬೆಟ್ಟಿನಮನೆ, ಡಾ.ಜಯಪ್ರಕಾಶ್ ಶೆಟ್ಟಿ, ಶಂಕರ್ ಕೆಂಚನೂರು, ಗಣೇಶ್ ಮೆಂಡನ್, ವೇದನಾಥ್ ಶೆಟ್ಟಿ ಹೇರಂಜಾಲು, ಲೋಯ್ ಕರ್ವೆಲ್ಲೋ, ಗಣೇಶ್ ಕೊರಗ, ಇದ್ರಿಸ್ ಹೂಡೆ, ಆಶಾ ಕರ್ವೆಲ್ಲೋ, ಶಂಕರ್ ಆನಗಳ್ಳಿ, ಕೇಶವ್ ಭಟ್, ಚಂದ್ರ ಅಮೀನ್, ವಿಠ್ಠಲ್ ಕಾಂಚನ್, ಅಭಿಜಿತ್ ಹೇರಿಕುದ್ರು, ತಿಮ್ಮಪ್ಪ ಗುಲ್ವಾಡಿ, ಸವಿತಾ ಆನಗಳ್ಳಿ, ಗೀತಾ ಆನಗಳ್ಳಿ, ಶೈಲಾ ಲೂವಿಸ್, ಶಾಂತಿ ಪಿಂಟೊ, ರಿಯಾಜ್ ಕೋಡಿ ಇದ್ದರು.
ಗೌರಿ ನೆನಪಿನಲ್ಲಿ ಸಾಮೂಹಿಕವಾಗಿ ಮೊಂಬತ್ತಿಗಳನ್ನು ಬೆಳಗಿಸಲಾಯಿತು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ ಸ್ವಾಗತಿಸಿ, ನಿರೂಪಿಸಿದರು. ಸಂಘಟನೆಯ ಸಂಚಾಲಕ ಚಂದ್ರಶೇಖರ ಶೆಟ್ಟಿ ವಂದಿಸಿದರು