ಚನ್ನರಾಯಪಟ್ಟಣ ಬಳಿ ಭೀಕರ ರಸ್ತೆ ಅಪಘಾತ: ಬೆಂಗಳೂರಿಗೆ ತೆರಳುತ್ತಿದ್ದ ಪಡುಕೋಣೆಯ ಯುವ ಇಂಜಿನಿಯರ್ ದುರ್ಮರಣ
ಕುಂದಾಪುರ: ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಬೈಂದೂರು ತಾಲೂಕಿನ ಚುಂಗಿಗುಡ್ಡೆ ಗ್ರಾಮದ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದ ಈ ಅಪಘಾತದಲ್ಲಿ ಅಕ್ಷಯ್ ಎನ್. ಹೆಬ್ಬಾರ್ (26) ಜೀವ ಕಳೆದುಕೊಂಡಿದ್ದಾರೆ.

ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್, ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದ ಅವರು, ತಿಂಗಳಿಗೊಮ್ಮೆ ಕಚೇರಿಗೆ ಹಾಜರಾಗುವ ಉದ್ದೇಶದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.
ಭಾನುವಾರ ಮುಂಜಾನೆ ಸುಮಾರು 4 ಗಂಟೆಗೆ ಮನೆಯಿಂದ ಬೈಕ್ನಲ್ಲಿ ಬೆಂಗಳೂರಿನತ್ತ ಹೊರಟಿದ್ದ ಅಕ್ಷಯ್, ಅಪಘಾತ ಸಂಭವಿಸುವ ಸ್ವಲ್ಪ ಮೊದಲು ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಚನ್ನರಾಯಪಟ್ಟಣದ ಸಮೀಪ ಟ್ರಕ್ಗೆ ಬೈಕ್ನ ಹ್ಯಾಂಡಲ್ ತಗುಲಿ, ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸ್ಥಳೀಯರಿಂದ ತಿಳಿದುಬಂದಿದೆ. ಆದರೆ ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಅಕ್ಷಯ್ ಓದಿನಲ್ಲಿ ಉತ್ತಮ ಸಾಧನೆ ಮಾಡಿದ್ದಲ್ಲದೆ, ಬೆಂಗಳೂರಿನಲ್ಲಿ ಉದ್ಯೋಗ ಪಡೆದು ಕುಟುಂಬದ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಹೊಂದಿದ್ದರು. ತಂದೆ-ತಾಯಿಯ ಏಕೈಕ ಪುತ್ರನಾಗಿದ್ದ ಅವರು ಕುಟುಂಬದ ಪ್ರೀತಿಯ ಕೇಂದ್ರವಾಗಿದ್ದರು. ಪ್ರತಿದಿನ ಸಂಜೆ ತಾಯಿಯೊಂದಿಗೆ ಚುಂಗಿಗುಡ್ಡೆ ರಸ್ತೆಯಲ್ಲಿ ವಾಕಿಂಗ್ಗೆ ತೆರಳುವುದು ಅವರ ನಿತ್ಯದ ಅಭ್ಯಾಸವಾಗಿತ್ತು.
ಅಕ್ಷಯ್ ಅವರ ತಂದೆ ನಾರಾಯಣ ಹೆಬ್ಬಾರ್ ಎಲ್ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುವುದರ ಜತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಮಗನ ಸಾವಿನ ಸುದ್ದಿ ಕುಟುಂಬಕ್ಕೆ ಆಘಾತ ತಂದಿದೆ.
ಉತ್ತಮ ಶಿಕ್ಷಣ ಪಡೆದು ಉದ್ಯೋಗ ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳುತ್ತಿದ್ದ ಯುವಕನ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ. ಚುಂಗಿಗುಡ್ಡೆ ಮತ್ತು ಪಡುಕೋಣೆ ಪರಿಸರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.













