ಜನರ ಸಮಸ್ಯೆಗೆ ಕಿವಿಯಾದ ಸಿಎಂ ಕುಮಾರಸ್ವಾಮಿ

Spread the love

ಜನರ ಸಮಸ್ಯೆಗೆ ಕಿವಿಯಾದ ಸಿಎಂ ಕುಮಾರಸ್ವಾಮಿ

ಮಂಗಳೂರು: ಭಾನುವಾರ ಮುಖ್ಯ ಮಂತ್ರಿ ಕುಮಾರಸ್ವಾಮಿ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳಿದ ಸಂದರ್ಭದಲ್ಲಿ ಅವರಿಗೆ ಅಹವಾಲು ಸಲ್ಲಿಸಲು ಬೃಹತ್‌ ಸಂಖ್ಯೆಯಲ್ಲಿ ಸಾರ್ವಜನಿಕರು ಕಾದು ನಿಂತಿದ್ದರು. ಅವರ ಮನವಿಗಳನ್ನು ಸ್ವೀಕರಿಸಿದ ಕುಮಾರಸ್ವಾಮಿ, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರಿಗೆ ಸೂಚಿಸಿದರು.

ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಮನವಿ ಹಿಡಿದು ಕಾದು ಕುಳಿತಿದ್ದರು. ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬಹುದಾದ ಹಲವು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮತ್ತೆ ಕೆಲವು ನಾಗರಿಕರಿಗೆ ಅವರ ಸಮಸ್ಯೆಗಳಿಗೆ ಬೆಂಗಳೂರಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದರು.

ಆಕಾಶಭವನದಲ್ಲಿ ನೆಲೆಸಿರುವ ಕೊಪ್ಪಳ ಮೂಲದ ಪುಷ್ಪಾ ಎಂಬವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಮಗಳು ಸುಷ್ಮಿತಾಳ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಸಲ್ಲಿಸಿದರು. ಬೆಸೆಂಟ್ ಕಾಲೇಜ್‌ನಲ್ಲಿ ಪಿಯುಸಿ ಕಲಿಯುತ್ತಿರುವ ಸುಷ್ಮಿತಾ ಕ್ರೀಡೆಯಲ್ಲಿ ಹಲವಾರು ಬಹುಮಾನ ಪಡೆದಿದ್ದು, ಮಗಳ ಸರ್ಟಿಫಿಕೇಟ್ ಗಳನ್ನು ಕುಮಾರಸ್ವಾಮಿ ಅವರಿಗೆ ತೋರಿಸಿದರು. ಮನವಿ ಮತ್ತು ವಿದ್ಯಾರ್ಥಿನಿಯ ಸಾಧನೆಯ ಪ್ರಮಾಣ ಪತ್ರಗಳನ್ನು ನೋಡಿದ ಅವರು, ಕೂಡಲೇ ಸುಷ್ಮಿತಾಳ ಚಿಕಿತ್ಸೆ ವೆಚ್ಚದ ಅಂದಾಜು ಪಟ್ಟಿ ಪಡೆದು ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಬಂಟ್ವಾಳ ತಾಲ್ಲೂಕಿನ ಮೇರೆಮಜಲು ಗ್ರಾಮದ ಶೋಭಾ ಎಂಬುವವರು ತನ್ನ ವಾಸದ ಮನೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಕೆಡವಿ ಹಾಕಿದ್ದು, ತನಗೆ ಯಾವುದೇ ನಿವೇಶನ ನೀಡದೆ ಬೀದಿಗೆ ಬಿದ್ದಿರುವುದಾಗಿ ಮುಖ್ಯಮಂತ್ರಿಯೊಡನೆ ಹೇಳಿಕೊಂಡರು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸಿಎಂ ಅಧಿಕಾರಿಗಳಿಗೆ ನಿರ್ದೇಶಿಸಿದರು. ನಿವೃತ್ತ ಶಿಕ್ಷಕರೊಬ್ಬರು ತನ್ನ ಮಗನಿಗೆ ಸೂಕ್ತ ಉದ್ಯೋಗ ಒದಗಿಸಲು ಮನವಿ ಸಲ್ಲಿಸಿದರು.

ಕದ್ರಿ ಶಿವಭಾಗ್ ನಲ್ಲಿ ನಡೆದ ಶಾಸಕ ಭೋಜೇಗೌಡ ಅವರ ಕಚೇರಿ ಉದ್ಘಾಟನೆ ಬಳಿಕ ಮುಖ್ಯಮಂತ್ರಿಗಳು ನೇರವಾಗಿ ಸಾರ್ವಜನಿಕರನ್ನು ಭೇಟಿಯಾಗಿ, ಸಾವಧಾನದಿಂದಲೇ ಅಹವಾಲು ಆಲಿಸಿದರು.


Spread the love