ಜು.24 ರಂದು ಆಟಿ ಅಮಾವಾಸ್ಯೆ: ತುಳುನಾಡಿನ ಜಾನಪದ ಔಷಧ ಆಟಿ ಕಷಾಯ ಮಹತ್ವ

Spread the love

ಜು.24 ರಂದು ಆಟಿ ಅಮಾವಾಸ್ಯೆ: ತುಳುನಾಡಿನ ಜಾನಪದ ಔಷಧ ಆಟಿ ಕಷಾಯ ಮಹತ್ವ

ತುಳುನಾಡಿನ ಪ್ರಾಚೀನ ಆಚರಣೆಯಾದ ಆಟಿ ಕಷಾಯ, ಆರೋಗ್ಯ ರಕ್ಷಣೆಗಾಗಿ ಆಟಿ ಅಮಾವಾಸ್ಯೆಯಂದು ಇಲ್ಲಿನ ಜನ ಸೇವಿಸುತ್ತಾರೆ, ಇದರ ಉಪಯೋಗಗಳು ಹಲವು . ಪಾಲೆ ಮರದ ತೊಗಟೆಯಿಂದ ತಯಾರಿಸಿದ ಈ ಕಷಾಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ.

ಆಟಿ ಕಷಾಯವು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಶರೀರದ ಬೊಜ್ಜನ್ನು ಕರಗಿಸುತ್ತದೆ. ಆಟಿ ಅಮಾವಾಸ್ಯೆಯಂದು ಪಾಲೆ ಮರದ ತೊಗಟೆಯಿಂದ ತಯಾರಾದ ಕಷಾಯವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಬಹುದು.

ಭೌಗೋಳಿಕವಾಗಿ ತುಳುನಾಡು ಪ್ರಾಚೀನ ಕಾಲದಲ್ಲಿ ಬೆಟ್ಟಗುಡ್ಡಗಳಿಂದ ಕೂಡಿದ ದಟ್ಟ ಮಳೆಕಾಡು ಪ್ರದೇಶ. ಪ್ರಕೃತಿಯ ವೈಪರೀತ್ಯ, ಅಕಾಲಿಕ ರೋಗರುಜಿನಗಳು, ವಿವಿಧ ಜೀವರಾಶಿಗಳೊಂದಿಗೆ ಸವಾಲುಗಳನ್ನು ಎದುರಿಸಿ ತನ್ನನ್ನು ರಕ್ಷಿಸಿಕೊಳ್ಳಲು ಹಲವು ವಿಧದ ಉಪಾಯಗಳನ್ನು ಕಂಡುಕೊಂಡ ಮನುಷ್ಯ, ಔಷಧ ಜ್ಞಾನವನ್ನೂ ಇದೇ ಪ್ರಕೃತಿಯ ಮಡಿಲಲ್ಲಿ ಗಳಿಸಿಕೊಂಡ. ಈ ಜ್ಞಾನವು ಅನುಕರಣೆಯಿಂದ ಜನಪದ ಆಚರಣೆಯಲ್ಲಿ ಈಗಲೂ ಪ್ರಚಲಿತದಲ್ಲಿದೆ. ಈ ಸಾಲಿನಲ್ಲಿ ಕಾಣಸಿಗುವುದು ಆಟಿ ಕಷಾಯ.

ದೈವಾರಾಧನೆಯೊಂದಿಗೆ ಪ್ರಕೃತಿಯನ್ನು ಆರಾಧಿಸಿ, ಆರೋಗ್ಯ ಕಾಪಾಡಿಕೊಳ್ಳಲು ಸಹಜವಾಗಿ ಕಾಡಿನಲ್ಲಿ ಬೆಳೆದು ರಸಭರಿತ ರೋಗನಿರೋಧಕ ಗುಣಗಳನ್ನು ವೃದ್ಧಿಸಿಕೊಂಡ ಪಾಲೆ ಮರದ ಕೆತ್ತೆ ಕಷಾಯವನ್ನು ಆಟಿ ಅಮಾವಾಸ್ಯೆಯಂದು ಸೇವಿಸುವ ರೂಢಿ ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ.

ಮಳೆಗಾಲದ ಆರಂಭದಲ್ಲಿ ವಾತಾವರಣದಲ್ಲಿ ಒಮ್ಮಿಂದೊಮ್ಮೆಲೇ ಉಂಟಾಗುವ ಬದಲಾವಣೆಗಳು ಮನುಷ್ಯನ ದೇಹದಲ್ಲಿ ನಾನಾ ರೋಗಗಳನ್ನು ಉಂಟುಮಾಡುತ್ತದೆ. ಆಟಿ ತಿಂಗಳು ಋುತು ಸಂಧಿ ಕಾಲದಲ್ಲಿ ಬರುವ ಸಮಯವಾಗಿದೆ. ಶರೀರವು ನಾನಾ ಬದಲಾವಣೆಗಳಿಗೆ ಹೊಂದಿಕೊಳ್ಳದಿದ್ದರೆ ರೋಗಗಳು ಬಾಧಿಸುತ್ತವೆ. ಈ ಸಮಯದಲ್ಲಿ ಗಿಡಮೂಲಿಕೆಗಳಲ್ಲಿ ಔಷಧೀಯ ಗುಣ ಹೇರಳವಾಗಿರುತ್ತವೆ. ಆಟಿ ಅಮಾವಾಸ್ಯೆಯಂದು ಪಾಲೆ ಮರದ ತೊಗಟೆಯಲ್ಲಿ ಸಂಗ್ರಹವಾಗಿರುವ ರಸವನ್ನು ಪ್ರಾತಃಕಾಲದಲ್ಲಿ ಕಲ್ಲಿನಿಂದ ಜಜ್ಜಿ ತೆಗೆದು ಸೇವಿಸುವುದರಿಂದ ಶರೀರದಲ್ಲಿರುವ ಕಲ್ಮಶಗಳನ್ನು ಹೊರ ಹಾಕಿ ರೋಗಗಳಿಂದ ರಕ್ಷಣೆ ಪಡೆಯಬಹುದು.

ಈ ಕಷಾಯವು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಉತ್ತಮ ಪರಿಣಾಮವನ್ನುಂಟು ಮಾಡುತ್ತದೆ. ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕಷಾಯವನ್ನು ಆಟಿ ಅಮಾವಾಸ್ಯೆಯಂದು ಮಾತ್ರವಲ್ಲದೇ ಉಳಿದ ಸಮಯದಲ್ಲೂ ಸೇವಿಸಬಹುದು. ಇದು ದೇಹವು ಅತಿ ಶೀಘ್ರವಾಗಿ ಶೀತ ವಾತಾವರಣವನ್ನು ತಡೆದುಕೊಳ್ಳುವ ಶಕ್ತಿಯನ್ನುಂಟು ಮಾಡುವುದಲ್ಲದೇ, ಹುಳಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ. ಆಹಾರದ ಪಚನ ಕ್ರಿಯೆಯನ್ನು ಉತ್ತಮಪಡಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಈ ಕಷಾಯವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ್ನು ನಿಯಂತ್ರಣದಲ್ಲಿಡುತ್ತದೆ. ಇದು ಶರೀರದ ಬೊಜ್ಜನ್ನು ಕರಗಿಸುತ್ತದೆ ಹಾಗೂ ತಾಯಂದಿರ ಎದೆ ಹಾಲನ್ನು ವೃದ್ಧಿಸುತ್ತದೆ. ಚರ್ಮರೋಗ, ಜ್ವರ, ವಿಷಮಜ್ವರ, ಅತಿಸಾರ, ಆಂತ್ರಹುಳ, ಹೃದ್ರೋಗ, ಶ್ವಾಸ, ವಾತ ರೋಗಗಳಿಗೆ ಪ್ರಯೋಜನಕಾರಿ.

ಕಷಾಯ ತಯಾರಿಸುವ ವಿಧಾನ
ಹಾಲೆ(ಸಪ್ತಪರ್ಣ) ಮರದ ತೊಗಟೆಯನ್ನು ನಸುಕಿನಲ್ಲಿ ಕಲ್ಲಿನಿಂದ ಜಜ್ಜಿ ತೆಗೆದು ಸ್ವಚ್ಛಗೊಳಿಸಿ ಗುದ್ದಿ ರಸ ತೆಗೆದು ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಬೆಳ್ಕಲ್ಲನ್ನು ಕಾಯಿಸಿ ಒಗ್ಗರಣೆ ಕೊಟ್ಟು ಸೇವಿಸಬೇಕು. ಒಂದು ಗಂಟೆ ನಂತರ ಮೆಂತೆ ಗಂಜಿ ಸೇವಿಸಬೇಕು.


Spread the love
Subscribe
Notify of

0 Comments
Inline Feedbacks
View all comments