ಜೈನ್ ಅರ್ಚಕರು, ಸಿಖ್ ಗ್ರಂಥಿಗಳಿಗೆ ಗೌರವಧನ- ಅರ್ಜಿ ಆಹ್ವಾನ
ಮಂಗಳೂರು: ಜೈನ್ ಸಮುದಾಯದ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವ ಧನ ನೀಡಲು ನಿಗಧಿತ ನಮೂನೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಫಲಾನುಭವಿಗಳು ದಕ್ಷಿಣ ಕನ್ನಡ ಜಿಲ್ಲೆಯ ಜೈನ್ ಬಸದಿಗಳು ಕರ್ನಾಟಕ ರಾಜ್ಯದಲ್ಲಿನ ಸಂಘಗಳ ನೋಂದಣಿ ಕಾಯ್ದೆಯನ್ವಯ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು. ಪ್ರಧಾನ ಗ್ರಂಥಿ/ಅರ್ಚಕರಿಗೆ ರೂ. 6 ಸಾವಿರ ಮತ್ತು ಸಹಾಯಕ ಗ್ರಂಥಿ/ಅರ್ಚಕರಿಗೆ ರೂ. 5 ಸಾವಿರ ಮಾಸಿಕ ಗೌರವಧನ ನೀಡಲಾಗುತ್ತದೆ. ಸಂಬಂಧಪಟ್ಟ ಅರ್ಚಕರು ಅರ್ಜಿಯನ್ನು ನಗರದ ಪಾಂಡೇಶ್ವರ ಮೌಲಾನಾ ಅಝಾದ್ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು.
ಸಲ್ಲಿಸಬೇಕಾದ ದಾಖಲೆಗಳು: ಅರ್ಜಿಯೊಂದಿಗೆ ಅರ್ಚಕರು/ಗ್ರಂಥಿಗಳ ಭಾವಚಿತ್ರ, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಪ್ರತಿ, ಅರ್ಚಕರು/ಗ್ರಂಥಿಗಳು ಅವರ ಹುದ್ದೆಗೆ ಸಂಬಂಧಪಟ್ಟ ಧಾರ್ಮಿಕ ವಿದ್ಯಾರ್ಹತೆಯ ಕುರಿತು ದಾಖಲೆ, ಕಳೆದ ಮೂರು ವರ್ಷಗಳಲ್ಲಿ ವಾಸವಿರುವ ಬಗ್ಗೆ ಸ್ಥಳೀಯ ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ, ಸಂಸ್ಥೆಯವರು ಅರ್ಚಕರ ಮಾಹೆವಾರು ಕರ್ತವ್ಯದ ಹಾಜರಾತಿ ಬಗ್ಗೆ ಹಾಗೂ ಸೇವಾ ಪ್ರಮಾಣ ಪತ್ರ ದೃಢೀಕರಣ ಪತ್ರವನ್ನು ನಿಗಧಿತ ನಮೂನೆಯಲ್ಲಿ ಸಲ್ಲಿಸಬೇಕು. ಸ್ಥಳೀಯ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿಯ ಪ್ರತಿ.
ಅರ್ಜಿ ನಮೂನೆ ಮತ್ತು ಇತರೆ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.













