ತುಳು ಸಿನಿಮಾರಂಗದಲ್ಲಿ ಮಿಂಚುತ್ತಿರುವ ಕೊಂಕಣಿ ಪ್ರತಿಭೆ ವೆನ್ಸಿಟಾ ಡಾಯಸ್: ಜೂನ್ 11ಕ್ಕೆ ಬಿಡುಗಡೆಯಾಗಲಿದೆ ‘ಕಜ್ಜ’
ಮಂಗಳೂರಿನ ಪ್ರತಿಭಾವಂತ ಮಗಳು ವೆನ್ಸಿಟಾ ಡಾಯಸ್ ಅವರು, ಜೂನ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ತುಳು ಚಿತ್ರ ‘ಕಜ್ಜ’ದ ಮೂಲಕ ತುಳು ಸಿನಿಮಾರಂಗದಲ್ಲಿ ತಮ್ಮ ಹೆಜ್ಜೆಯನ್ನು ಮುಂದುವರಿಸುತ್ತಿದ್ದು, ಯುವ ಕನಸುಗಾರರಿಗೆ ಸ್ಫೂರ್ತಿಯಾಗಿದ್ದಾರೆ.
ಕ್ಯಾಥೊಲಿಕ್ ಸಮುದಾಯದ ಹೆಮ್ಮೆಯ ಸದಸ್ಯೆ ಮತ್ತು ಭಾವನಾತ್ಮಕ ಕಲಾವಿದೆಯಾಗಿರುವ ವೆನ್ಸಿಟಾ, ಈಗಾಗಲೇ ‘ಅಸ್ಮಿತಾಯ್’ ಮತ್ತು ‘ಗಬ್ಬರ್ ಸಿಂಗ್’ನAತಹ ಚಿತ್ರಗಳಲ್ಲಿನ ತಮ್ಮ ಅಭಿನಯದ ಮೂಲಕ ಮನರಂಜನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಅವರ ಶ್ರದ್ಧೆ ಮತ್ತು ಪ್ರತಿಭೆಗೆ ‘ಕೋಸ್ಟಲ್‌ವುಡ್ ಫಿಲ್ಮ್ಫೇರ್ ಅವಾರ್ಡ್ಸ್-2025’ರಲ್ಲಿ ‘ಅತ್ಯುತ್ತಮ ಡೆಬ್ಯೂ ನಟಿ’ (ಪಾದಾರ್ಪಣೆ) ಪ್ರಶಸ್ತಿ ಲಭಿಸಿದೆ. ಇದು ಅವರನ್ನು ಕರಾವಳಿ ಕರ್ನಾಟಕದ ಭರವಸೆಯ ಯುವ ಮುಖಗಳಲ್ಲಿ ಒಬ್ಬರನ್ನಾಗಿ ಗುರುತಿಸುವಂತೆ ಮಾಡಿದೆ.
ವೆನ್ಸಿಟಾ ಸದ್ಯ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ‘ಮಾಸ್ ಕಮ್ಯುನಿಕೇಶನ್ ಅಂಡ್ ಮೀಡಿಯಾ ಸ್ಟಡೀಸ್’ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ನಟನೆಯ ಹೊರತಾಗಿ, ಅವರು ಟೆಡ್‌ಎಕ್ಸ್ (ಖಿಇಆx) ಭಾಷಣಕಾರರಾಗಿ, ‘ಇರಾ ಅವಾರ್ಡ್ಸ್-2026’ರಲ್ಲಿ ‘ರೈಸಿಂಗ್ ಸ್ಟಾರ್’ ಪ್ರಶಸ್ತಿ ಮತ್ತು ‘ರೋಟರಿ ಕ್ಲಬ್-2025’ರಲ್ಲಿ ‘ಯಂಗ್ ಅಚೀವರ್’ ಪ್ರಶಸ್ತಿ ಪುರಸ್ಕೃತರಾಗಿ ಹೆಸರುವಾಸಿಯಾಗಿದ್ದಾರೆ. ಇದಲ್ಲದೆ, ಮಹತ್ವಾಕಾಂಕ್ಷಿ ಮಾಡೆಲ್‌ಗಳು ಮತ್ತು ಕಲಾವಿದರಿಗೆ ಮಾರ್ಗದರ್ಶನ ನೀಡಲು ಅವರು ‘ವೆನ್ಜ್ ಮಾಡೆಲಿಂಗ್ ಅಕಾಡೆಮಿ’ಯನ್ನು ಸ್ಥಾಪಿಸಿದ್ದಾರೆ. ಇವಿಷ್ಟೇ ಅಲ್ಲದೆ, ಅವರು ಅಂತಾರಾಷ್ಟಿçÃಯ ಫ್ಯಾಷನ್ ಕೊರಿಯೋಗ್ರಾಫರ್ ಕೂಡ ಆಗಿದ್ದಾರೆ. ಮಂಗಳೂರು ಮತ್ತು ಸುತ್ತಮುತ್ತಲಿನ ಅನೇಕ ಮನರಂಜನಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಮತ್ತು ತೀರ್ಪುಗಾರರಾಗಿ ಆಹ್ವಾನಿಸಲ್ಪಡುವುದು ಅವರ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಇದರ ಮೂಲಕ ಅವರು ಯುವಜನತೆಯ ಪಾಲಿಗೆ ಆದರ್ಶಪ್ರಾಯರಾಗಿದ್ದಾರೆ. ಕೆಲ ತಿಂಗಳುಗಳಿAದ ತಮ್ಮ ಯೂಟ್ಯೂಬ್ ಚಾನೆಲ್ ‘ವೆನ್ಜ್ ವ್ಲಾಗ್ಸ್’ ಮೂಲಕವೂ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
‘ಕಜ್ಜ’ ಚಿತ್ರದಲ್ಲಿ ವೆನ್ಸಿಟಾ ಕ್ರಿಶ್ಚಿಯನ್ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದು, ಆ ಪಾತ್ರಕ್ಕೆ ತಮ್ಮ ಸಹಜ ಅಭಿನಯ ಮತ್ತು ಭಾವನೆಗಳ ಮೂಲಕ ಜೀವ ತುಂಬಿದ್ದಾರೆ. ತುಳು ಚಿತ್ರರಂಗದಲ್ಲಿ ಕೊಂಕಣಿ ಸಮುದಾಯವನ್ನು ಪ್ರತಿನಿಧಿಸುವ ಯುವ ನಟಿಯಾಗಿ ಅವರ ಈ ಉಪಸ್ಥಿತಿ ಬಹಳ ಮಹತ್ವದ್ದಾಗಿದೆ. ತಮ್ಮ ಈ ಸಿನಿ ಪಯಣವು ಕೊಂಕಣಿ ಮತ್ತು ಕ್ಯಾಥೊಲಿಕ್ ಸಮುದಾಯದ ಹೆಚ್ಚಿನ ಯುವಕ-ಯುವತಿಯರು ತಮ್ಮ ಕನಸುಗಳನ್ನು ನಿರ್ಭಯವಾಗಿ ಬೆನ್ನಟ್ಟಲು ಪ್ರೇರೇಪಿಸುತ್ತದೆ ಎಂದು ಅವರು ಆಶಿಸುತ್ತಾರೆ.
ಜೂನ್ 11ರಂದು ‘ಕಜ್ಜ’ ಚಿತ್ರ ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರು ಈ ಹೃದಯಸ್ಪರ್ಶಿ ಕಥೆಯನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ, ಸ್ಥಳೀಯ ಸಿನಿಮಾಗಳನ್ನು ಬೆಂಬಲಿಸಬೇಕೆAದು ವೆನ್ಸಿಟಾ ಕೋರಿದ್ದಾರೆ.
ವಿದ್ಯಾರ್ಥಿನಿಯಾಗಿದ್ದರೂ, ನಟಿ, ಕೊರಿಯೋಗ್ರಾಫರ್, ಟೆಡ್‌ಎಕ್ಸ್ ಭಾಷಣಕಾರರು, ಉದ್ಯಮಿ, ಯೂಟ್ಯೂಬರ್ ಮತ್ತು ಯುವ ಜನತೆಯ ಸ್ಪೂರ್ತಿ (ಐಕಾನ್) ಆಗಿ ತಮ್ಮ ಸಾಧನೆಗಳನ್ನು ಮುಂದುವರಿಸಿರುವ ವೆನ್ಸಿಟಾ ಡಾಯಸ್, ದೃಢ ನಿಶ್ಚಯ, ಉತ್ಸಾಹ ಮತ್ತು ಪರಿಶ್ರಮವಿದ್ದರೆ ಕನಸುಗಳನ್ನು ನನಸಾಗಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.













