ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ್ದ ಪ್ರತಾಪ್ ಸಿಂಹ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

Spread the love

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ್ದ ಪ್ರತಾಪ್ ಸಿಂಹ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಮೈಸೂರು: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ನಾಯಕ ಪ್ರತಾಪ್ ಸಿಂಹ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ, ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ, ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದೆ.
ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ. ಅವರು ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು. ಭುವನೇಶ್ವರಿ, ಕನ್ನಡ ಬಾವುಟದ ಬಗ್ಗೆ ಮುಷ್ತಾಕ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದ ವಕೀಲರು, ಬಾನು ಮುಷ್ತಾಕ್ ನೀಡಿದ ಹೇಳಿಕೆಯ ಇಂಗ್ಲಿಷ್ ಅನುವಾದ ಸಲ್ಲಿಕೆ ಮಾಡಿದರು.

ಪ್ರತಾಪ್ ಸಿಂಹ ಪರ ವಕೀಲರು ಮಂಡಿಸಿದ್ದ ವಾದಕ್ಕೆ ಪ್ರತಿಯಾಗಿ, ಈ ದೇಶದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುವುದು ತಪ್ಪಲ್ಲವಲ್ಲ. ನಿಮ್ಮ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ ಸಿಜೆ ವಿಭು ಬಖ್ರು ಪ್ರಶ್ನೆ ಮಾಡಿದರು. ನಿಮ್ಮ ಅಭಿಪ್ರಾಯವನ್ನು ಕೂಡಾ ಸೂಕ್ತ ವೇದಿಕೆಯಲ್ಲಿ ಹೇಳಬಹುದು. ಆದರೆ ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ ಎಂದರು.

ಪೂಜಾರಿಯ ಪೂಜೆಯ ಹಕ್ಕನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ಆದರೆ ಇಲ್ಲಿ ನಿಮ್ಮ ಯಾವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಸಿಜೆ ಪ್ರಶ್ನಿಸಿದರು.

ಆಗ ಪ್ರತಾಪ್ ಸಿಂಹ ಪರ ವಕೀಲರು, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯ ಸಂಪ್ರದಾಯವಿದೆ. ಆದರೆ, ಬಾನು ಮುಷ್ತಾಕ್ ಅವರಿಂದ ಉದ್ಘಾಟನೆಗೆ ವಿರೋಧವಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶಿಷ್ಟಾಚಾರ ಪಾಲಿಸುವುದು ಬೇರೆ ವಿಚಾರ. ಆದರೆ ನಿಮ್ಮ ಕಾನೂನಾತ್ಮಕ ಹಕ್ಕಿನ ಬಗ್ಗೆ ವಾದ ಮಂಡಿಸಿ ಎಂದಿದೆ. ಅಲ್ಲದೆ, ಧರ್ಮವನ್ನು ಪಾಲಿಸುವ ಹಕ್ಕನ್ನು ಸಂವಿಧಾನದಲ್ಲಿ ಗುರುತಿಸಲಾಗಿದೆ ಎಂದಿದೆ.

ಪ್ರತಾಪ್ ಸಿಂಹ ಮಾತ್ರವಲ್ಲದೆ ಟಿ. ಗಿರೀಶ್ ಕುಮಾರ್, ಹೆಚ್.ಎಸ್.ಗೌರವ್ ಎಂಬವರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವುಗಳನ್ನೂ ಕೋರ್ಟ್ ವಜಾಗೊಳಿಸಿದೆ.

ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಅರ್ಜಿದಾರರಿಗೆ ದಂಡ ವಿಧಿಸಬೇಕೆಂದು ಆಗ್ರಹಿಸಿದರು. ದಸರಾ ಉದ್ಘಾಟಿಸಿದ ನಿಸಾರ್ ಅಹಮದ್ ಜೊತೆಗೆ ಪ್ರತಾಪ್ ಸಿಂಹ ಇದ್ದರು. ಆಗ ವಿರೋಧಿಸದೇ, ಈಗ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದರು. ತಾರತಮ್ಯ ಮಾಡುವಂತಿಲ್ಲವೆಂದು ಮುಜರಾಯಿ ಇಲಾಖೆ ಸುತ್ತೋಲೆಯಿದೆ. ದೇವಾಲಯಗಳಿಗೆ ಯಾರು ಬೇಕಾದರೂ ಬರಲು ಅವಕಾಶವಿದೆ ಎಂದು ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದರು.


Spread the love
Subscribe
Notify of

0 Comments
Inline Feedbacks
View all comments