ದಿಡುಪೆ ಫಾಲ್ಸ್‌ ನಲ್ಲಿ ಯುವಕ-ಯುವತಿಗೆ ಅಡ್ಡಗಟ್ಟಿ ಬೆದರಿಕೆ ಆರೋಪ: 6 ಮಂದಿಯ ವಿರುದ್ಧ ಪ್ರಕರಣ

Spread the love

ದಿಡುಪೆ ಫಾಲ್ಸ್‌ ನಲ್ಲಿ ಯುವಕ-ಯುವತಿಗೆ ಅಡ್ಡಗಟ್ಟಿ ಬೆದರಿಕೆ ಆರೋಪ: 6 ಮಂದಿಯ ವಿರುದ್ಧ ಪ್ರಕರಣ

ಬೆಳ್ತಂಗಡಿ: ದಿಡುಪೆ ಫಾಲ್ಸ್‌ಗೆ ಸ್ನೇಹಿತನೊಂದಿಗೆ ತೆರಳಿದ್ದ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಅಡ್ಡಗಟ್ಟಿ, ಅನ್ಯಧರ್ಮೀಯ ಯುವಕನೊಂದಿಗೆ ಬಂದಿರುವ ವಿಚಾರವಾಗಿ ತಕರಾರು ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವತಿಯೊಬ್ಬರು ನೀಡಿದ ದೂರಿನ ಪ್ರಕಾರ, ಜುಲೈ 12ರಂದು ರಜೆ ಇದ್ದ ಕಾರಣ ತಮ್ಮ ಸ್ನೇಹಿತನೊಂದಿಗೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್‌ಗೆ ತೆರಳಿದ್ದರು. ಈ ವೇಳೆ ಪಾರ್ಕಿಂಗ್ ಪ್ರದೇಶಕ್ಕೆ ಬಂದಾಗ ಸುಮಾರು ಐದರಿಂದ ಆರು ಮಂದಿ ಅವರನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.

ಯುವತಿ ಅನ್ಯಧರ್ಮೀಯ ಯುವಕನೊಂದಿಗೆ ಬಂದಿರುವುದನ್ನು ಪ್ರಶ್ನಿಸಿ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2026ರಡಿ ಬಿಎನ್‌ಎಸ್-2023ರ ಕಲಂ 126(2), 352, 351(2) ಹಾಗೂ 3(5) ಅನ್ವಯ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.


Spread the love
Subscribe
Notify of

0 Comments