ದೋಷಯುಕ್ತ ಎಲೆಕ್ಟ್ರಿಕ್ ವಾಹನ ಮಾರಾಟ: ಓಲಾ ಕಂಪೆನಿಗೆ ದ.ಕ. ಗ್ರಾಹಕ ನ್ಯಾಯಾಲಯದ ತೀರ್ಪು

Spread the love

ದೋಷಯುಕ್ತ ಎಲೆಕ್ಟ್ರಿಕ್ ವಾಹನ ಮಾರಾಟ: ಓಲಾ ಕಂಪೆನಿಗೆ ದ.ಕ. ಗ್ರಾಹಕ ನ್ಯಾಯಾಲಯದ ತೀರ್ಪು

ಮಂಗಳೂರು: ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ದೋಷಯುಕ್ತ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿದ್ದ ಪ್ರಕರಣದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಕಂಪೆನಿಗೆ ಗ್ರಾಹಕನ ಪರ ತೀರ್ಪು ನೀಡಿದೆ.

ಮಂಗಳೂರಿನ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದರ ಉದ್ಯೋಗಿ ಉದಯ್ ಕುಮಾರ್ ಬಿ.ಸಿ. ಅವರು ಓಲಾ ಸಂಸ್ಥೆಯಿಂದ 1.17 ಲಕ್ಷ ರೂ. ಪಾವತಿಸಿ ಸ್ಕೂಟರ್ ಖರೀದಿಸಿದ್ದರು. ಆದರೆ ಖರೀದಿಸಿದ ಒಂದು ತಿಂಗಳಲ್ಲೇ ವಾಹನ ರಸ್ತೆ ಮಧ್ಯದಲ್ಲಿ ಹಠಾತ್ತನೆ ನಿಲ್ಲುತ್ತಿದ್ದು, ನಿರಂತರ ತೊಂದರೆ ಅನುಭವಿಸಿದರು.

ಮೊದಲ ಬಾರಿಗೆ ದೂರು ನೀಡಿದಾಗ ಸಂಸ್ಥೆ ದುರಸ್ತಿ ಮಾಡಿದರೂ, ಸಮಸ್ಯೆ ಮುಂದುವರಿಯುತ್ತಲೇ ಇತ್ತು. ಅನೇಕ ಬಾರಿ ರಿಪೇರಿ ನೆಪದಲ್ಲಿ ವಾಹನವನ್ನು ತಮ್ಮ ಬಳಿ ಇಟ್ಟುಕೊಂಡರೂ, ಶಾಶ್ವತ ಪರಿಹಾರ ನೀಡಲು ಓಲಾ ವಿಫಲವಾಯಿತು.

ಅಂತಿಮವಾಗಿ ಉದಯ್ ಕುಮಾರ್ ಕಾನೂನು ನೋಟೀಸ್ ನೀಡಿ, ನಂತರ ಗ್ರಾಹಕರ ಪರಿಹಾರ ಆಯೋಗವನ್ನು ಸಂಪರ್ಕಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಓಲಾ ಸಂಸ್ಥೆ ಸೇವಾ ನ್ಯೂನ್ಯತೆ ತೋರಿದೆ ಹಾಗೂ ದೋಷಯುಕ್ತ ಉತ್ಪನ್ನ ಮಾರಾಟ ಮಾಡಿದೆ ಎಂದು ಸ್ಪಷ್ಟಪಡಿಸಿತು.

ತೀರ್ಪಿನ ಪ್ರಕಾರ, ಕಂಪೆನಿಯು 45 ದಿನಗಳೊಳಗೆ ಸ್ಕೂಟರ್‌ನ್ನು ಸಂಚಾರಯೋಗ್ಯವಾಗಿ ರಿಪೇರಿ ಮಾಡಬೇಕು. ತಪ್ಪಿದರೆ, 1.17 ಲಕ್ಷ ರೂ. ಮೊತ್ತವನ್ನು ಶೇಕಡಾ 6ರ ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಸೇವಾ ನ್ಯೂನ್ಯತೆಗೆ ರೂ. 10,000 ದಂಡ ಹಾಗೂ ಪ್ರಕರಣದ ವೆಚ್ಚವಾಗಿ ರೂ. 5,000ವನ್ನು 45 ದಿನಗಳಲ್ಲಿ ಪಾವತಿಸಲು ಸೂಚಿಸಿದೆ.

ಈ ಪ್ರಕರಣದಲ್ಲಿ ಗ್ರಾಹಕರ ಪರವಾಗಿ ವಕೀಲ ತೇಜಕುಮಾರ್ ಡಿ.ಎಂ. ವಾದ ಮಂಡಿಸಿದರು.


Spread the love
Subscribe
Notify of

0 Comments
Inline Feedbacks
View all comments