ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿತು.
ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರದ ಭದ್ರತಾ ಲೋಪದ ಕಾರಣಕ್ಕೆ ಪಹಲ್ಗಾಮ್ ನಲ್ಲಿ ದೇಶದ 26 ಅಮಾಯಕ ನಾಗರಿಕರ ಹತ್ಯೆಯಾಯಿತು. ಈ ಬಗ್ಗೆ ಸಂಸತ್ ಅಧಿವೇಶನಲ್ಲಿ ಕಾಂಗ್ರೆಸ್ ನಾಯಕರು ಪ್ರಶ್ನಿಸಲು ಮುಂದಾದರೆ ಸರಿಯಾದ ಉತ್ತರ ನೀಡಬೇಕಾದ ಪ್ರಧಾನಿ ಮೋದಿ ಅವರು ಸುಳ್ಳಿನ ಮುಖಾಂತರ ಜನರ ಭಾವನೆ ತಿರುಚಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಸಂಚುಕೋರರ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ಕಠಿಣ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಆದರೆ ಪ್ರಧಾನಿ ಮೋದಿ ಈಗ ರಾಜಕೀಯಗೊಳಿಸುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಎರಡು ಬಾರಿ ಸರ್ವ ಪಕ್ಷ ಸಭೆ ಕರೆದರೂ ಪ್ರಧಾನಿ ಬರಲಿಲ್ಲ. ದೇಶಕ್ಕಾಗಿ ಹೋರಾಡಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮೇಲೆ ಪ್ರಧಾನಿಯವರು ಯಾವುದೇ ಕಾರಣಕ್ಕೂ ಗೂಬೆ ಕೂರಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆ.17ರಂದು ಕಡಬ ಪಟ್ಟಣ ಪಂಚಾಯತ್ ಗೆ ನಡೆಯಲಿರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ ಜಿಲ್ಲೆಗೆ ಸಂದೇಶ ರವಾನಿಸಬೇಕು. ಈ ನಿಟ್ಟಿನಲ್ಲಿ ನಾಯಕರು, ಕಾರ್ಯಕರ್ತರು ಕೂಡಲೇ ಕಾರ್ಯಪ್ರತೃರಾಗಬೇಕು ಎಂದ ಅವರು, ಆ.30ರ ಒಳಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಜಿ.ಪಂ., ತಾ.ಪಂ. ಮಾಜಿ ಸದಸ್ಯರು, ಗ್ರಾ.ಪಂ.ಚುನಾಯಿತ ಪ್ರತಿನಿಧಿ ಮತ್ತು ಪರಾಜಿತ ಅಭ್ಯರ್ಥಿಗಳ ಸಮಾವೇಶ ಆಯೋಜಿಸಬೇಕು ಎಂದು ಬ್ಲಾಕ್ ಅಧ್ಯಕ್ಷರುಗಳಿಗೆ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಖಂಡಿಸಿ ಕೆಪಿಸಿಸಿ ವತಿಯಿಂದ ಆ.5ರಂದು ಬೆಂಗಳೂರಿನ ಮಹದೇವಪುರದಲ್ಲಿ ಆಯೋಜಿಸಿರುವ ಪ್ರತಿಭಟನೆಗೆ ಜಿಲ್ಲೆಯಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕಿ ಶಂಕುಲಾ ಶೆಟ್ಟಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ದಯರ್ಶಿ ಪದ್ಮರಾಜ್ ಪೂಜಾರಿ, ಪ್ರಧಾನ ಕಾರ್ದಯರ್ಶಿ ಎಂ.ಎಸ್.ಮೊಹಮ್ಮದ್, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮುಖಂಡರಾದ ಕೆ.ಕೆ.ಶಾಹುಲ್ ಹಮೀದ್, ಕೆ.ಅಪ್ಪಿ, ಉಷಾ ಅಂಚನ್, ಜೋಕಿಂ ಡಿಸೋಜ, ದಿನೇಶ್ ಮುಳೂರು, ಇಬ್ರಾಹೀಂ ನವಾಝ್, ಶಾಲೆಟ್ ಪಿಂಟೊ, ಸುಹಾನ್ ಆಳ್ವ, ಚೇತನ್ ಬೆಂಗ್ರೆ ಸೇರಿದಂತೆ ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಸಭೆ ಆರಂಭಕ್ಕೂ ಮುನ್ನ ಇತ್ತೀಚಿಗೆ ಅಗಲಿದ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಕುಂಞಿ ಪಳ್ಳಿ ಸುಳ್ಯ, ಬಂಟ್ವಾಳ ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಜಿಲ್ಲಾ ಪಂ. ಮಾಜಿ ಸದಸ್ಯ ಚಂದ್ರಲಿಂಗಂ, ಜಿಲ್ಲಾ ಎನ್ಎಸ್ ಯುಐ ಉಪಾಧ್ಯಕ್ಷ ಓಂಶ್ರೀ ಅವರಿಗೆ ಸಂತಾಪ ಸೂಚಿಸಲಾಯಿತು.