ದ.ಕ.ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನ: ಸುಳ್ಳು ಸುದ್ದಿ ಹರಡುವವರಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾ ಎಸ್ಪಿ ಅರುಣ್

Spread the love

ದ.ಕ.ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನ: ಸುಳ್ಳು ಸುದ್ದಿ ಹರಡುವವರಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾ ಎಸ್ಪಿ ಅರುಣ್

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ ಕೋಮುಸೌಹಾರ್ದ ಮತ್ತು ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿ, ಸಂದೇಶ,ಪೋಸ್ಟ್ ರವಾನಿಸುತ್ತಿದ್ದಾರೆ. ಅದರಲ್ಲಿ ಕೆಲವು ಕಿಡಿಗೇಡಿಗಳು, ವಿದ್ಯಾವಂತರು, ಸಂಘಟಕರು ಭಾಗವಹಿಸುತ್ತಿರುವುದು ಜಿಲ್ಲೆಗೆ ಕಪ್ಪುಚುಕ್ಕೆ ತರುವಂತಹ ವಿದ್ಯಮಾನವಾಗಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಾ, ಸಂಪೂರ್ಣ ವಿಷಯವನ್ನು ಮುಚ್ಚಿಟ್ಟು ಅರ್ಧಸತ್ಯವನ್ನು ಮಾತ್ರ ನೀಡುವ ಮೂಲಕ ಜನಸಾಮಾನ್ಯರನ್ನು ತಪ್ಪುದಾರಿಗೆಳೆಯುವವರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಎಚ್ಚರಿಸಿರುವ ಜಿಲ್ಲಾ ಎಸ್ಪಿ ಡಾ. ಅರುಣ್ ಈ ನಿಟ್ಟಿನಲ್ಲಿ ಮಾಧ್ಯಮ ಮಿತ್ರರು ಸಾರ್ವಜನಿಕರಿಗೆ ಮಾಹಿತಿ ಯನ್ನು ತಲುಪಿಸುವುದರ ಜೊತೆಗೆ ಸುಳ್ಳು ಸುದ್ದಿಗಳು ಹರಡುವ ಕಿಡಿಗೇಡಿಗಳು/ಸಂಘಟಕರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಹಲವರು ಬೇರೆ ಬೇರೆ ವಿಚಾರಗಳಲ್ಲಿ ಸತ್ಯವನ್ನು ಮರೆಮಾಚಿ ಸುಳ್ಳು ಸುದ್ದಿ ಪ್ರಚಾರ ಮಾಡಿ ಸಮಾಜಕ್ಕೆ ತಪ್ಪುಸಂದೇಶ ನೀಡಿ ಜನರನ್ನು ಪ್ರಚೋದನೆಗೊಳ್ಳುವಂತೆ ಮಾಡಿ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತೆ ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

ಸುಳ್ಳು ಸುದ್ದಿ ಅಥವಾ ಪ್ರಚೋದನಾಕಾರಿ ಸಂದೇಶಗಳನ್ನು ಜಿಲ್ಲೆಯ ಜನರು ನಂಬಬಾರದು. ಅಂತಹ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡದೆ ಅಂತಹ ವ್ಯಕ್ತಿಗಳು/ಸಂಘಟನೆಗಳನ್ನು ಕಡೆಗಣಿಸಿದಾಗ ಮಾತ್ರ ಅವುಗಳನ್ನು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಅಥವಾ ಪೋಸ್ಟ್ ಹಂಚುವ ಮುನ್ನ ಅದರ ನೈಜತೆಯನ್ನು ಪರಿಶೀಲಿಸುವಂತೆ ಎಸ್ಪಿ ಮನವಿ ಮಾಡಿದ್ದಾರೆ.

  • ಮೃತ ಅಬ್ದುಲ್ ರಹ್ಮಾನ್‌ಗೆ ಸಂಬಂಧಿಸಿದಂತೆ ಅಕ್ರಮ ಸಂಬಂಧಕ್ಕೆ ಕೊಲೆ ಆದ ಕಾಮುಕನ ಪರ ಇಡಿ ಸಮುದಾಯದ ಜನ ನಿಂತಿದ್ದಾರೆ ಎಂದು ಪ್ರಚೋದನಾಕಾರಿ ಪೋಸ್ಟ್ ಫೇಸ್ಬುಕ್ ಖಾತೆಯಲ್ಲಿ ಹರಿಯಬಿಟ್ಟಿದ್ದರು. ಈ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ವೇಳೆ ಇದು ಸುಳ್ಳು ಎಂದು ಕಂಡುಬಂದಿದೆ.
  • ಉಮರ್ ಫಾರೂಕ್ ನಂದಾವರ ಎಂಬವರು ಜೂನ್ 11ರಂದು ತನ್ನ ಜೀಪ್‌ನಲ್ಲಿ ದೇರಳಕಟ್ಟೆ ಕಡೆ ಹೋಗುತ್ತಿ ದ್ದಾಗ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ತಲವಾರು ಬೀಸಿ, ಕೊಲೆಗೆ ಯತ್ನಿಸಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ತನಿಖೆಯ ವೇಳೆ ಇದು ಕೂಡ ಸುಳ್ಳು ದೂರು ಎಂದು ತಿಳಿದುಬಂದಿದೆ. ಹಾಗಾಗಿ ಉಮರ್ ಫಾರೂಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
  • ದೂರು ಕೊಟ್ಟ ಸಂತ್ರಸ್ಥನ ಮೇಲೆಯೇ ಸುಳ್ಳು ಕೇಸ್ ಹಾಕಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆಂದು ಅಶ್ರಫ್ ತಲಪಾಡಿ ಎಂಬವರು ಗಲಭೆಗೆ ಪ್ರಚೋಚನೆ ನೀಡಿದ್ದರು. ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
  • ಆಗಸ್ಟ್ 20ರಂದು ಸಂಜೆ 19.50ಕ್ಕೆ ತಾನು ಬಸ್ಸಿನಿಂದ ಇಳಿದು ಪಾಣೆಮಂಗಳೂರು ರೈಸ್‌ಮಿಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸ್ಕೂಟರನಲ್ಲಿ ಬಂದ ವ್ಯಕ್ತಿ ಮೈಗೆ ಕೈ ಹಾಕಿದ್ದ ಎಂದು ದೂರು ನೀಡಿದ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಮಾಜದಲ್ಲಿ ಕೋಮು ಸೌಹಾರ್ದ ಹಾಳು ಮಾಡುವ ಉದ್ದೇಶದಿಂದ ಅನ್ಯ ಸಮುದಾಯದ ವ್ಯಕ್ತಿ ಈ ಕೃತ್ಯ ಎಸಗಿದ್ದಾರೆಂದು ಸುಳ್ಳು ಪ್ರಚಾರ ಮಾಡಿ ಸಾಮರಸ್ಯವನ್ನು ಕೆಡಿಸಲು ಪ್ರಯತ್ನಿಸಿರುವುದು ತನಿಖೆಯ ಸಂದರ್ಭ ತಿಳಿದು ಬಂದಿದೆ. ಈ ಕೃತ್ಯವನ್ನು ಅದೇ ಸಮುದಾಯದ ಬಾಲಾಪರಾಧಿ ಮಾಡಿದ್ದು, ಬಾಲಾಪರಾಧಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
  • ಜುಲೈ 5ರಂದು ಪುತ್ತೂರಿನ ಬೀರುಮಲೆ ಬೆಟ್ಟದ ಬಳಿ ಹುಡುಗ ಮತ್ತು ಹುಡುಗಿ ಇಬ್ಬರು ಕುಳಿತಿರುವ ವೇಳೆ ಅಪರಿಚಿತ ವ್ಯಕ್ತಿಗಳು ಏಕಾಏಕಿ ತಡೆದು ನಿಲ್ಲಿಸಿ ಹುಡುಗನ ಬಳಿ ನೀನು ಬ್ಯಾರಿಯಾ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದು, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಸಂಬಂಧ ಪುತ್ತೂರು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಹುಡುಗ, ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರೆಂದು ತಿಳಿದುಬಂದಿದೆ.
  • ಜು.14ರಂದು ಬೊಳುವಾರು ಮಸೀದಿ ಬಳಿ ವ್ಯಕ್ತಿಯೊಬ್ಬ ತಲವಾರು ಹಿಡಿದುಕೊಂಡು ಸಾರ್ವಜನಿಕರಿಗೆ ತಿರುಗಾ ಡುತ್ತಿದ್ದ ಸಂಬಂಧ ರಾಜು ಸಕಲೇಶಪುರ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಅಶ್ರಫ್ ಬಾವು ಪುತ್ತೂರು ಎಂಬವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

Spread the love
Subscribe
Notify of

0 Comments
Inline Feedbacks
View all comments