ನವೆಂಬರ್ 1 ರಿಂದ ಒಂದು ತಿಂಗಳವರೆಗೆ ದಕ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ
ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 251006 (ದನ, ಕರು, ಎಮ್ಮೆ, ಹಂದಿ) ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮವನ್ನು ಪಲ್ಸ್ ಪೋಲಿಯೋ ಮಾದರಿ ಬೃಹತ್ ಅಂದೋಲನ ರೀತಿಯಲ್ಲಿ 13 ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ದ.ಕ.ಹಾಲು ಒಕ್ಕೂಟ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.
ನವೆಂಬರ್ 1 ರಿಂದ ಒಂದು ತಿಂಗಳವರೆಗೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದರಿ ರೋಗವು ವೈರಾಣುವಿನಿಂದ ತೀವ್ರವಾಗಿ ಹರಡುವ ರೋಗವಾಗಿದ್ದು, ಇದರ ಚಿಕಿತ್ಸೆ ಮತ್ತು ನಿಯಂತ್ರಣ ಕಷ್ಟಸಾಧ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸದರಿ ರೋಗವು ಬಾರದ ರೀತಿಯಲ್ಲಿ ನಿಯಂತ್ರಿಸಲು ಲಸಿಕೆಯು ಏಕೈಕ ಮಾರ್ಗವಾಗಿರುತ್ತದೆ.
ರೋಗ ಬಂದ ಜಾನುವಾರುಗಳಲ್ಲಿ ಸಾವು ಸಂಭವಿಸುವುದು ವಿರಳವಾದರೂ 2013 ರಲ್ಲಿ ರಾಜ್ಯದಾದ್ಯಂತ ತೀವ್ರವಾಗಿ ಹರಡಿದ ರೋಗವು ಸಾವಿರಾರು ಜಾನುವಾರುಗಳನ್ನು ಬಲಿ ತೆಗೆದುಕೊಂಡಿರುತ್ತದೆ. ಸದರಿ ರೋಗದ ಚಿಕಿತ್ಸಾ ವಿಧಾನವೂ ಸಹ ಬಹಳ ತ್ರಾಸದಾಯಕ ಮತ್ತು ಆರ್ಥಿಕವಾಗಿ ನಷ್ಟ ಉಂಟು ಮಾಡುವಂತಹದ್ದಾಗಿರುತ್ತದೆ. ಆದುದರಿಂದ ಕಾಲುಬಾಯಿ ರೋಗ ನಿಂಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಮಾರ್ಗವಾಗಿದ್ದು, ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿದ್ದರೂ ಸಹ ಪ್ರತಿ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಈ ಕಾಯಿಲೆಯನ್ನು ತಡೆಗಟ್ಟಲು ಲಸಿಕಾ ವಿಧಾನವೊಂದೇ ಸುಲಭ ಉಪಾಯವಾಗಿರುತ್ತದೆ.
ಜಿಲ್ಲೆಯಾದ್ಯಂತ ನಿಗದಿತ ದಿನಾಂಕಗಳಂದು ಪಶುಪಾಲನಾ ಇಲಾಖೆ ಮತ್ತು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 34 ತಂಡಗನ್ನು ರಚಿಸಲಾಗಿದ್ದು, ಪ್ರತಿ ತಂಡಕ್ಕೆ ಒಂದು ವಾಹನದ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ. 286 ಸಿಬ್ಬಂದಿಗಳು ಲಸಿಕೆದಾರರಾಗಿ ಕಾರ್ಯ ನಿರ್ವಹಿಸಲು ಕಾರ್ಯಕ್ರಮ ರೂಪಿಸಿದೆ. ಜಿಲ್ಲೆಯ ಪ್ರತಿ ಜಾನುವಾರು ಮಾಲೀಕರುಗಳು ತಮ್ಮ ತಮ್ಮ ಗ್ರಾಮದಲ್ಲಿ ನಿಗದಿಪಡಿಸಿದ ದಿನಾಂಕದಂದು ತಪ್ಪದೆ ಸಹಕರಿಸಿ ತಮ್ಮ ಎಲ್ಲಾ ದನ, ಕರು, ಎಮ್ಮೆ ಮತ್ತು ಹಂದಿಗಳಿಗೆ ಲಸಿಕೆ ಹಾಕಿಸುವುದರ ಮೂಲಕ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇಲಾಖಾವತಿಯಿಂದ ಕೋರಲಾಗುತ್ತಿದೆ.
ಅದೇ ರೀತಿ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವ ಸದಸ್ಯರು ಮತ್ತು ಅಧ್ಯಕ್ಷರುಗಳು, ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು, ಗ್ರಾಮ ಪಂಚಾಯತ್ಗಳು ಇತರೆ ಸಂಘ ಸಂಸ್ಥೆಗಳು ಸಕ್ರಿಯವಾಗಿ ಈ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದರಿ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಹಕರಿಸಲು ಇಲಾಖಾವತಿಯಿಂದ ವಿನಂತಿಸಿದೆ. ರಾಜ್ಯಾದ್ಯಂತ ನವೆಂಬರ್ 2017 ಮಾಹೆಯಲ್ಲಿ ನಡೆಸಲಿರುವ 13ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಗೊಳಿಸಲು ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ದ.ಕ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.













