ನಾಪತ್ತೆಯಾಗಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮೃತದೇಹ ಪತ್ತೆ

Spread the love

ನಾಪತ್ತೆಯಾಗಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮೃತದೇಹ ಪತ್ತೆ

ಉಡುಪಿ: ನಾಪತ್ತೆಯಾಗಿದ್ದ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಅವರ ಮೃತದೇಹ ಕಾರ್ಕಳ ಸಮೀಪದ ಪುಲ್ಕೇರಿ ಬಳಿ ಬಾವಿಯಲ್ಲಿ ಪತ್ತೆಯಾಗಿದೆ

ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿಯಾಗಿರುವ ಶೃತಿನ್ ಶೆಟ್ಟಿ (35) ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್ 19 ರಂದು ಅವರು ನಾಪತ್ತೆಯಾಗಿದ್ದರು.

ಅಕ್ಟೋಬರ್ 19 ಗುರುವಾರ ರಾತ್ರಿ 7.30ಕ್ಕೆ ಹೆಂಡತಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು, ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿಯಿಡೀ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಗಾಬರಿಯಾಗಿರುವ ಪತ್ನಿ ಪೂಜಾ ಶೆಟ್ಟಿಯವರು ಶುಕ್ರವಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಸತತವಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಅಕ್ಟೋಬರ್ 23 ರಂದು ಬೆಳಿಗ್ಗೆ ಕಾರ್ಕಳ ಸಮೀಪದ ಪುಲ್ಕೇರಿ ಬಳಿ ಬಾವಿಯಲ್ಲಿ ಶೃತಿನ್ ಶೆಟ್ಟಿ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಕಾರ್ಕಳ ನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

2008ರ ಬ್ಯಾಚಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಬಡ್ತಿಯಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಆಗಿ ಬಂದಿದ್ದರು. ಅ.17ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.


Spread the love