ನ್ಯಾಯಾಲಯಕ್ಕೆ ನಕಲಿ ದಾಖಲೆ ನೀಡಿ ಜಾಮೀನು ಪಡೆಯಲು ಯತ್ನಿಸಿದ ಆರೋಪಿ ಬಂಧನ
ಪುತ್ತೂರು: ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ ಆರೋಪಿಗೆ ಜಾಮೀನು ಪಡೆಯಲು ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ನಿವಾಸಿಯೊಬ್ಬರ ಮಾಲಿಕತ್ವದಲ್ಲಿದ್ದ ಜಮೀನಿನ ಆರ್‌ಟಿಸಿಯನ್ನು ತನ್ನ ಹೆಸರಿನ ಆರ್‌ಟಿಸಿಯೆಂದು ನಂಬಿಸಿ, ಮಂಗಳೂರು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ಪಡೆಯಲು ಪ್ರಯತ್ನಿಸಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 417 (ವಂಚನೆ), 419 (ವ್ಯಕ್ತಿತ್ವದ ಮೋಸ), 467 (ನಕಲಿ ದಾಖಲೆ ಸೃಷ್ಟಿ), 468 (ವಂಚನೆಗಾಗಿ ನಕಲಿ ದಾಖಲೆ ಸೃಷ್ಟಿ) ಮತ್ತು 471 (ನಕಲಿ ದಾಖಲೆ ಬಳಕೆ) ಅಡಿ ಅ.ಕ್ರ 84/2025ರಡಿ ಪ್ರಕರಣ ದಾಖಲಾಗಿತ್ತು.
ತನಿಖೆಯ ವೇಳೆ ನಕಲಿ ದಾಖಲೆಗಳನ್ನು ತಯಾರಿಸಿ, ತಾನು ಪಿರ್ಯಾದುದಾರನೆಂದು ಹೇಳಿಕೊಂಡು ನಕಲಿ ಸಹಿ ಮಾಡಿದ್ದ ಹಾಗೂ ನ್ಯಾಯಾಲಯಕ್ಕೆ ಭದ್ರತಾ ದಾಖಲೆ ಸಲ್ಲಿಸಿ ವಂಚನೆಗೈದಿದ್ದ ಆರೋಪಿ ಅಬ್ದುಲ್ ಹಾಶೀಮ್ (34), ಪಡುವನ್ನೂರು ಗ್ರಾಮ, ಪುತ್ತೂರು ನಿವಾಸಿಯಾಗಿದ್ದು, ನವೆಂಬರ್ 6 ರಂದು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶ ನೀಡಿದೆ.













