ಪಣಂಬೂರಿನಲ್ಲಿ ಭೀಕರ ಸರಣಿ ಅಪಘಾತ: ಮೂವರು ಮೃತ್ಯು
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಆಟೋ ಚಾಲಕ ಮೊಹಮ್ಮದ್ ಕುಂಚಿ ಉಳ್ಳಾಲ, ಪ್ರಯಾಣಿಕರಾದ ಅಬೂಬಕ್ಕರ್ ಮತ್ತು ಇಬ್ರಾಹಿಂ ಕೊಣಾಜೆ. ಗಾಯಗೊಂಡವರನ್ನು ಆನಂದ ಸನಿಲ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ಮೊಹಮ್ಮದ್ ಶೇಖ್ ನನ್ನು ಬಂಧಿಸಲಾಗಿದೆ
ಪಣಂಬೂರು ಸಿಗ್ನಲ್ ಬಳಿ ಈ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕರ್, ಆಟೊ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿವೆ.
ಸಿಗ್ನಲ್ ನಲ್ಲಿ ನಿಂತಿದ್ದ ಟ್ಯಾಂಕರ್ ವೊಂದರ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ.
ಈ ವೇಳೆ ಆಟೊ ರಿಕ್ಷಾ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಡಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.













