ಪಶ್ಚಿಮ ಘಟ್ಟದ ಮೂಲ ಆವಾಸ ಸ್ಥಾನಗಳಿಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮ
ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್‍ಗಾರ್ಡನ್‍ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಸ್ಥಾಪನೆ ಶೀರ್ಷಿಕೆಯಡಿಯಲ್ಲಿ ರೂ. 98.00 ಲಕ್ಷದ ಅನುದಾನದಲ್ಲಿ ಅಕ್ವೇರಿಯಂ ನ್ನು ಸ್ಥಾಪಿಸಲಾಗಿದೆ. ಅಕ್ವೇರಿಯಂನಲ್ಲಿ ಸುಮಾರು 22 ಜಾತಿಯ ಮೀನುಗಳನ್ನು ಸಾಕಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶದಲ್ಲಿ ಒಂದಾದ ವಿನಾಶದ ಅಂಚಿನಲ್ಲಿರುವ ಕಿಜಾನ್, ಮಲಬಾರ್ ಡೈನೊ, ಚಂದ್ರಡಿಕೆ ಮುಂತಾದ ಇತರೆ ಮೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಅವಾಸ ಸ್ಥಾನಕ್ಕೆ ಕೊಂಡೊಯ್ದು ಬಿಡಲಾಗುವುದು. ಈ ಕಾರ್ಯಕ್ರಮವನ್ನು ದಿನಾಂಕ: 28.06.2018 ರಂದು ಪೂರ್ವಾಹ್ನ 10.30 ಗಂಟೆಗೆ ಕರ್ನಾಟಕ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ದ.ಕ. ಜಿಲ್ಲಾ ಪಂಚಾಯತ್‍ನ ಸಹಯೋಗದಿಂದ ನಡೆಸಲಾಗುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ಇವರು ನೆರವೇರಿಸಲಿರುವರು. ದ.ಕ. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ಎಂ.ಆರ್. ರವಿ (ಭಾ.ಆ.ಸೇ), ಅರಣ್ಯ ಅಧಿಕಾರಿಗಳು, ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು.
ಈ ಕಾರ್ಯಕ್ರಮವನ್ನು ವೇಣೂರು ಅಳದಂಗಡಿ ನಡುವೆ ಇರುವ ನದಿ ಮತ್ತು ಹಳ್ಳಗಳಿಗೆ ಮೀನುಗಳನ್ನು ಬಿಟ್ಟು ಸಂರಕ್ಷಣೆಗೆ ಚಾಲನೆ ನೀಡಲಾಗುವುದು.
            











