ಪುತ್ತೂರು | ಕಾರಿಗೆ ಬಸ್ ಢಿಕ್ಕಿ: ಮೂವರಿಗೆ ಗಾಯ, ಓರ್ವರ ಸ್ಥಿತಿ ಗಂಭೀರ
ಪುತ್ತೂರು: ಖಾಸಗಿ ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ. ಕಾರಿನಲ್ಲಿದ್ದ ಮಗು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಬಕ ಸಮೀಪದ ಮುರ ಜಂಕ್ಷನ್ ನಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಪಡ್ನೂರು ಸಮೀಪದ ಅಂಡೆಪುಣಿ ನಿವಾಸಿ ಈಶ್ವರ್ ಭಟ್, ಅವರ ಪುತ್ರಿ ಅಪೂರ್ವಾ ಹಾಗೂ ಅವರ ಪುಟಾಣಿ ಮಗು ಗಾಯಗೊಂಡಿದೆ.
ಈಶ್ವರ ಭಟ್ ಅಂಡೆಪುನಿ ಅವರ ಮನೆಯಲ್ಲಿ ಇಂದು ಕಾರ್ಯಕ್ರಮವಿದ್ದು, ಅದಕ್ಕಾಗಿ ಅವರ ಮಗಳು ಅಪೂರ್ವಾ ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದರು. ಅವರನ್ನು ಪುತ್ತೂರು ಪೇಟೆಯಿಂದ ಈಶ್ವರ್ ಭಟ್ ತನ್ನ ವ್ಯಾಗನರ್ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮುರ ಜಂಕ್ಷನ್ ಬಳಿ ಪಡ್ನೂರಿಗೆ ತೆರಳುವ ಒಳರಸ್ತೆಗೆ ಕಾರನ್ನು ತಿರುಗಿಸುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಖಾಸಗಿ ಬಸ್ಸು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನಜ್ಜುಗುಜ್ಜಾಗಿದೆ. ಕಾರಿನೊಳಗಡೆ ಸಿಲುಕಿದ್ದ ಮೂವರೂ ಗಾಯಗೊಂಡಿದ್ದರು.
ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಕಾರಿನಲ್ಲಿ ಆಗಮಿಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಇತರ ಸ್ಥಳೀಯರು ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು.
ಗಂಭೀರವಾಗಿ ಗಾಯಗೊಂಡಿರುವ ಅಪೂರ್ವಾರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಶ್ವ ಭಟ್ ಹಾಗೂ ಅವರ ಮೊಮ್ಮಗಳು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.