ಪುತ್ತೂರು: ವಸತಿ ಶಾಲೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ದಿಢೀರ್ ಭೇಟಿ
ಮಂಗಳೂರು: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಶುಕ್ರವಾರ ಪುತ್ತೂರು ತಾಲೂಕಿಗೆ ಭೇಟಿ ಸಂದರ್ಭದಲ್ಲಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಮೊರಾರ್ಜಿ ದೇಸಾಯಿ ಶಾಲೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಹಾಸ್ಟೆಲ್ ಸಮಗ್ರ ಕಟ್ಟಡ ಹಾಗೂ ಅಡುಗೆ ಕೋಣೆಯನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಭೋಜನದ ಗುಣಮಟ್ಟ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಆಹಾರ ಸಾಮಗ್ರಿ ಸಂಗ್ರಹಣೆ ಕೊಠಡಿ ಪರಿಶೀಲಿಸಿದರು.
ಬಳಿಕ ವಿದ್ಯಾರ್ಥಿಗಳ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ವಸತಿ ಶಾಲೆಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಆಹಾರ ಮತ್ತು ಸೌಲಭ್ಯಗಳ ಗುಣಮಟ್ಟವನ್ನು ಕಾಪಾಡುವಂತೆ ಸಿಬ್ಬಂಧಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಮೀನು ಅಳತೆ ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿಯವರು ಪುತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ದರ್ಖಾಸ್ತು ಜಮೀನಿನ ಅಳತೆ ಕೆಲಸದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಭೂದಾಖಲೆಗಳ ಉಪನಿರ್ದೇಶಕಿ ಪ್ರಸಾದಿನಿ, ತಹಶೀಲ್ದಾರ್ ಶಿವಶಂಕರ್ ಕಂದಾಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಂತರ ಪುತ್ತೂರು ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.













