ಪೌತಿ ಖಾತೆ ಮಾಡಿ ಕೊಡಲು ಲಂಚದ ಬೇಡಿಕೆ: ಉಪ ತಹಶೀಲ್ದಾರ್ ಸಹಿತ ಮೂವರು ಲೋಕಾಯುಕ್ತ ಬಲೆಗೆ
ಮಂಗಳೂರು: ಪಿರ್ಯಾದಿದಾರರು ತಾಯಿಯ ಪೌತಿ ಖಾತೆಯ ವಿಚಾರವಾಗಿ 2021 ನೇ ಇಸವಿಯಲ್ಲಿ ಬಂಟ್ವಾಳ ತಾಲೂಕು ಕಛೇರಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದು ಮಾನ್ಯ ಜಿಲ್ಲಾಧಿಕಾರಿಯವರ ನ್ಯಾಯಾಲಯವು ಜಮೀನು ಮಂಜೂರಾತಿ ಆದೇಶವನ್ನು ಪುರಸ್ಕರಿಸಿದ್ದು, ಮಾನ್ಯ ಜಿಲ್ಲಾಧಿಕಾರಿಯವರ ನ್ಯಾಯಾಲಯದ ಆದೇಶದಂತೆ ಸಹಾಯಕ ಆಯುಕ್ತರ ನ್ಯಾಯಾಲಯ ಸಜೀಪ ಮುನ್ನೂರು ಗ್ರಾಮದ ಸರ್ವೆ ನಂಬ್ರ 102/1 ರಲ್ಲಿ ಪಿರ್ಯಾದಿದಾರರ ಪೌತಿ ಖಾತೆ ಮಾಡಿ ಕೊಡಲೂ ತಹಶೀಲ್ದಾರ್ ಬಂಟ್ವಾಳ ರವರಿಗೆ ಆದೇಶ ನೀಡಿದ್ದು, ಸದರಿ ಫೈಲನ್ನು ಎಪ್ರಿಲ್ 2025 ರಿಂದ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಬಾಕಿ ಇಟ್ಟುಕೊಂಡಿದ್ದು, ಈ ಬಗ್ಗೆ ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಮತ್ತು ಕೇಸ್ ವರ್ಕರ್ ಸಂತೋಷ್ ರವರಲ್ಲಿ ವಿಚಾರಿಸಿದಾಗ ಪೌತಿ ಖಾತೆ ಕೆಲಸದ ಕೇಸ್ ವರ್ಕರ್ ಸಂತೋಷ್ ರವರು ಪೌತಿ ಖಾತೆ ಮಾಡಲೂ ರೂ 1500/- ಹಾಗೂ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಪೌತಿ ಖಾತೆ ಮಾಡಿಕೊಡಲು ತಹಶೀಲ್ದಾರರಿಗೆ ರೂಪಾಯಿ 20000/- ನೀಡಬೇಕು ಎಂದು ಹೇಳಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಈ ಬಗ್ಗೆ ಪಿರ್ಯಾದಿದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಮತ್ತು ಕೇಸ್ ವರ್ಕರ್ ಸಂತೋಷ್ ರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಈ ದಿನ ದಿನಾಂಕ 13.08.2025 ರಂದು ಪಿರ್ಯಾದಿದಾರರಿಂದ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ರವರು ಬ್ರೋಕರ್ ಗಣೇಶ್ ವಾಮದಪದವು ರವರ ಮುಖಾಂತರ ರೂ 20,000/- (ಇಪ್ಪತ್ತು ಸಾವಿರ) ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್, ಕೇಸ್ ವರ್ಕರ್ ಸಂತೋಷ್, ಬ್ರೋಕರ್ ಗಣೇಶ್ ವಾಮದಪದವು ರವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಮುಂದುವರೆದು ಬಂಟ್ವಾಳ ತಾಲೂಕು ತಹಸೀಲ್ದಾರರ ಪಾತ್ರದ ಕುರಿತು ತನಿಖೆ ನಡೆಸಲಾಗುವುದು.
ಈ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.