ಪ್ರಧಾನಿ ಮೋದಿ ಭೇಟಿ ಹಿನ್ನಲೆ: ಕೃಷ್ಣ ಮಠದಲ್ಲಿ ಪ್ರಥಮ ಪೂರ್ವಭಾವಿ ಸಭೆ
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣಮಠದಲ್ಲಿ ನಡೆಯುವ ಐತಿಹಾಸಿಕ ಲಕ್ಷಕಂಠ ಗೀತಾ ಆಯೋಜನೆ ಹಾಗೂ ಪ್ರಧಾನಮಂತ್ರಿಯವರ ಭೇಟಿಯ ಪೂರ್ವತಯಾರಿಗಳ ಬಗ್ಗೆ ಉಡುಪಿ ಶ್ರೀಕೃಷ್ಣಮಠ ಸಮೀಪದ ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಪಾದರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸ್ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ತಮ್ಮ ಕಳೆದ ಪರ್ಯಾಯದಲ್ಲಿ ಗುಜರಾತಿನ ಮುಖ್ಯಮಂತ್ರಿಗಳಾಗಿ ಆಗಮಿಸಿದ್ದ ನರೇಂದ್ರ ಮೋದಿಯವರು ಈ ಬಾರಿ ಪುನಃ ನಮ್ಮ ಪರ್ಯಾಯದಲ್ಲಿಯೇ ಪ್ರಧಾನಮಂತ್ರಿಗಳಾಗಿ ಆಗಮಿಸುತ್ತಿದ್ದು, ಉಡುಪಿಯ ಸಭ್ಯತೆ, ಸಂಸ್ಕೃತಿ, ಆತಿಥ್ಯಗಳ ವಿಶೇಷತೆಗಳು ಸರ್ವರಿಗೂ ತಿಳಿಯುವಂತೆ ಕಾರ್ಯಕ್ರಮ ಆಯೋಜನೆಯಾಗಬೇಕಿದ್ದು, ಪ್ರಧಾನಮಂತ್ರಿಗಳ ಸುರಕ್ಷತೆಗೂ ಸಂಪೂರ್ಣ ಆದ್ಯತೆ ನೀಡಬೇಕಿದೆ. 1 ತಿಂಗಳ ಪರ್ಯಂತವಾಗಿ ನಡೆಯುವ ಗೀತೋತ್ಸವದಲ್ಲಿ ಸಂತ ಸಂಗಮ, ಗೀತಾ ಮಹಾಯಾಗ, ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಇತ್ಯಾದಿ ನಡೆಯಲಿದ್ದು, ಈ ಕಾರ್ಯಕ್ರಮಗಳಿಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀಯೋಗಿ ಆದಿತ್ಯನಾಥ, ಅಮೇರಿಕ ಸೇರಿದಂತೆ ವಿಶ್ವದ ಹಲವು ಗಣ್ಯರು , ಹಾಗೂ ಹಲವು ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. ಇದು ಸಮಗ್ರ ಉಡುಪಿಗೆ ಗೌರವ ತರುವ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು ಎಲ್ಲ ಜನರೂ ಇದರ ಯಶಸ್ಸಿಗೆ ಕೈಜೋಡಿಸಬೇಕು ಎಂದರು.
ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಮಾತನಾಡಿ, ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳ ಎಲ್ಲ ಕಾರ್ಯಕ್ರಮಗಳು ವಿಶೇಷವಾಗಿದ್ದು, ಶ್ರೀಗಳ ಕಳೆದ ಪರ್ಯಾಯದಲ್ಲಿಯೂ ಉಡುಪಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಪ್ರಸಕ್ತ ಉಡುಪಿಗೆ ಪ್ರಧಾನಮಂತ್ರಿಗಳ ಭೇಟಿಯೊಂದಿಗೆ ಉಡುಪಿಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಕ್ಕಂತಾಗುವುದು, ಇದಕ್ಕಾಗಿ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕರಿಸಬೇಕೆಂದು ಕೋರಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸಹಕರಿಸುವ ಭರವಸೆ ನೀಡಿದರು. ಜಿಲ್ಲಾ ಪೋಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕಂದಾಯ ಉಪ ಆಯುಕ್ತರಾದ ರಶ್ಮಿ, ತಹಶೀಲ್ದಾರರಾದ ಗುರುರಾಜ್ ಮೊದಲಾದವರು ಭಾಗವಹಿಸಿದ್ದರು.
ದಿವಾನರಾದ ನಾಗರಾಜ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು, ಸಾಗರೋತ್ತರ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಂದಿಸಿದರು, ಮಠದ ಪ್ರಮುಖರಾದ ಸಂತೋಷ್ ಶೆಟ್ಟಿ ತೆಂಕರಗುತ್ತು, ರತೀಶ್ ತಂತ್ರಿ ,ಪ್ರಮೋದ್ ಸಾಗರ್, ಯೋಗೀಂದ್ರ ಭಟ್ , ರವೀಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.













