ಬಂಟಕಲ್ಲು ದುರ್ಗಾ ಮಹಿಳಾ ಚೆಂಡೆ ಬಳಗ: ಅದ್ದೂರಿಯ ಶ್ರಾವಣ ಸಂಭ್ರಮ ಕಾರ್ಯಕ್ರಮ
ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದ ವತಿಯಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮವು ಬಹಳ ಅದ್ದೂರಿ ಹಾಗೂ ಸಡಗರದಿಂದ ಜರಗಿತು.
ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಈ ಸಮಾರಂಭದ ಉದ್ಘಾಟನೆಯನ್ನು ಸಾರಸ್ವತ ಸಂದೇಶ್ ಪತ್ರಿಕೆಯ ಸಂಪಾದಕರಾದ ಶ್ರೀ ಗೋಪಾಲಕೃಷ್ಣ ನಾಯಕ್,ಸರಳೇಬೆಟ್ಟು ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮುಖ್ತ ಅತಿಥಿಗಳಾಗಿ ಕುಂಜಾರುಗಿರಿ ಆನಂದತೀರ್ಥ ವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅನಸೂಯಾ ಪ್ರಭು ಹಾಗೂ ಮಣಿಪಾಲದ ಮುನಿಯಾಲ್ ಆಯುರ್ವೇದ ವೈದ್ಯಕೀಯ ವಿಜ್ಞಾನ ಕಾಲೇಜ್ ನ ಗ್ರಂಥಪಾಲಕಿ ಜ್ಯೋತಿ ಎಂ ಅವರು ಆಗಮಿಸಿದ್ದು ನಮ್ಮ ಸಂಪ್ರದಾಯ, ಸಂಸ್ಕೃತಿಗಳನ್ನು ನಮ್ಮ ಮಕ್ಕಳಿಗೆ ವಿವಿಧ ಆಚರಣೆಗಳ ಮೂಲಕ ತಿಳಿಸಿಕೊಡಬೇಕು.ಹಬ್ಬಗಳ ಮಹತ್ವಗಳನ್ನು ತಿಳಿಸುವ ಕೆಲಸ ಮಹಿಳೆಯರಿಂದ ಅರ್ಥಾತ್ ತಾಯಂದಿರಿಂದ ಆಗಬೇಕಾಗಿದೆ ಎಂದು ಹೇಳಿದರು.
ಆರಂಭದಲ್ಲಿ ಸಂಜನಾ ಪಾಟ್ಕರ್ ಪ್ರಾರ್ಥಿಸಿದರು.ಬಳಗದ ಅಧ್ಯಕ್ಷರಾದ ಗೀತಾ ವಾಗ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಂ.ಬಾಲಕೃಷ್ಣ ನಾಯಕ್, ಬನ್ನಂಜೆ, ನಾರಾಯಣ ಪ್ರಭು,ಗುಳ್ಮೆ ಮತ್ತುಉಷಾನಾಯಕ್ ,ಕಾರ್ಕಳ ಈ ಮೂವರು ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಕರ್ವಾಲು ಸುಬ್ರಾಯ ಕಾಮತ್ ದಂಪತಿಗಳನ್ನು ದಂಪತಿ ಸತ್ಕಾರ ಕಾರ್ಯಕ್ರಮದನ್ವಯ ಗೌರವಿಸಲಾಯಿತು.ಉಪಸ್ಥಿತರಿದ್ದ ಎಲ್ಲಾ ಸುಮಂಗಲಿಯರಿಗೆ ಶ್ರಾವಣ ಮಾಸದ ಸಂಪ್ರದಾಯದಂತೆ ಉಡಿ ತುಂಬಿಸುವ ಕಾರ್ಯಕ್ರಮವು ಜರಗಿತು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಮಾತ್ರವಲ್ಲದೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸೃಜನ್ ಎಂಬ ಹುಡುಗನಿಗೆ ಚಿಕಿತ್ಸೆಗೆಂದು ಧನಸಹಾಯವನ್ನು ನೀಡಲಾಯಿತು
ರೇಶ್ಮಾ ನಾಗೇಶ್,ವಿದ್ಯಾ ಉಮೇಶ್ ಮತ್ತು ನೀಲವೇಣಿ ಅರುಣ್ ಸಂಮಾನ ಪತ್ರವನ್ನು ವಾಚಿಸಿದರು.ಆಶಾ ನಾಯಕ್ ಮತ್ತು ಸಂಗೀತಾ ಪಾಟ್ಕರ್ ಅತಿಥಿಗಳನ್ನು ಪರಿಚಯಿಸಿದರು. ಶೈಲಜಾ ವಿಶ್ವನಾಥ್ ಪಾಟ್ಕರ್ ವರದಿ ವಾಚಿಸಿದರು.
ಇದೇ ವೇದಿಕೆಯಲ್ಲಿ ಚೆಂಡೆ ಬಳಗದ ವತಿಯಿಂದ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಸಭಾಭವನದ ನಿರ್ಮಾಣಕ್ಕೆ ರೂ.1,01111 ಮೊತ್ತವನ್ನು ದೇಣಿಗೆಯಾಗಿ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು, ಗಂಪದಬೈಲು ಅವರಿಗೆ ಬಳಗದ ಸದಸ್ಯರು ಹಸ್ತಾಂತರಿಸಿದರು.
ರಾಜಾಪುರ ಸೇವಾ ವೃಂದದ ಅಧ್ಯಕ್ಷ ಶ್ರೀ ಕೆ.ಆರ್.ಪಾಟ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದ ಅಧ್ಯಕ್ಷೆ ವನಿತಾ.ಡಿ.ಬೋರ್ಕರ್ ,ದೇವಳದ ಆಧ್ಯಕ್ಷರಾದ ಉಮೇಶ್ ಪ್ರಭು ಪಾಲಮೆ,,ಶಶಿಧರ್ ವಾಗ್ಳೆ, ಪುಂಡಲೀಕ ಮರಾಠೆ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು
ಕುಸುಮಾ ಕಾಮತ್ ನಿರೂಪಿಸಿ ವಂದಿಸಿದರು.ಕೊನೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಶ್ರಾವಣ ಮಾಸದ ವಿಶೇಷ ಸಾಂಪ್ರದಾಯಿಕ ತಿನಿಸುಗಳನ್ನು ಉಣಬಡಿಸಲಾಯಿತು. ಕಲಾವಿದರಾದ ಕು.ಸ್ವಪ್ನಾ ನಾಯಕ್,ಕುಕ್ಕೆಹಳ್ಳಿ ಮತ್ತು ಪ್ರಜ್ವಲ್ ಪ್ರಭು,ಆತ್ರಾಡಿ ಅವರು ನಡೆಸಿಕೊಟ್ಟ ಸಂಗೀತ ಸೌರಭ ಕಾರ್ಯಕ್ರಮವು ಈ ಸಮಾರಂಭಕ್ಕೆ ಮೆರುಗು ನೀಡಿತು.