ಬನ್ನಂಜೆ ನಾರಾಯಣ ಗುರು ವೃತ್ತ ತೆರವು ಮಾಡಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ : ಯಶ್ಪಾಲ್ ಸುವರ್ಣ
ಉಡುಪಿ: ಬನ್ನಂಜೆ ಶ್ರೀ ನಾರಾಯಣ ಗುರು ವೃತ್ತವನ್ನು ತೆರವು ಗೊಳಿಸಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕ್ರಮಕೈಗೊಳ್ಳುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹ ಮಾಡಿದ್ದಾರೆ.
ಬನ್ನಂಜೆ ನಾರಾಯಣ ಗುರು ಮಂದಿರದ ಬಳಿ ಹಲವು ವರ್ಷಗಳ ಹಿಂದೆ ಅಳವಡಿಸಿದ್ದ ವೃತ್ತವನ್ನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ತೆರವು ಗೊಳಿಸಿರುವುದು ಅತ್ಯಂತ ಖಂಡನೀಯ,
ಉಡುಪಿ ನಗರಸಭೆ, ಸ್ಥಳೀಯ ಜನಪ್ರತಿನಿಧಿಗಳು, ಬನ್ನಂಜೆ ನಾರಾಯಣ ಗುರು ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡದೆ ತೆರವುಗೊಳಿಸಿರುವುದು ಅಕ್ಷಮ್ಯ ಹಾಗೂ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಂಡ ಬಳಿಕ ಬನ್ನಂಜೆ ವೃತ್ತದಲ್ಲಿ ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಿ ಸುಸಜ್ಜಿತ ವೃತ್ತ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ನಿರ್ಣಯ ಮಾಡಲಾಗಿದೆ. ಈಗ ತರಾತುರಿಯಲ್ಲಿ ಹಲವು ವರ್ಷದ ಹಿಂದೆ ಸ್ಥಾಪಿಸಿದ್ದ ವೃತ್ತವನ್ನು ತೆರವು ಮಾಡಿರುವ ಮೂಲಕ ಉಡುಪಿ ಜನತೆಯ ಭಾವನೆಗೆ ಧಕ್ಕೆ ತಂದ ವ್ಯಕ್ತಿಯನ್ನು ತಕ್ಷಣ ಬಂಧಿಸಿ, ಹೊಸ ವೃತ್ತ ನಿರ್ಮಾಣ ಗೊಳ್ಳುವವರೆಗೆ ತೆರವು ಮಾಡಿರುವ ವೃತ್ತವನ್ನು ಪುನರ್ ಅಳವಡಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.