ಬಹುಕೋಟಿ ವಂಚನೆ ಪ್ರಕರಣ| ಆರೋಪಿ ರೋಶನ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಲು ಮನವಿ
ಮಂಗಳೂರು: ಹಲವರಿಗೆ ಕೋಟ್ಯಂತರ ಹಣ ವಂಚಿದ ಆರೋಪಿ ಕಂಕನಾಡಿ ಬೊಳ್ಳಗುಡ್ಡೆ ನಿವಾಸಿ ರೋಶನ್ ಸಲ್ಡಾನ ನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದ್ದು, ಜು.23ರಂದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ವಂಚನೆಗೊಳಗಾದವರು ಇದೀಗ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಬಿಹಾರ ಮೂಲದ ಉದ್ಯಮಿ ಯೊಬ್ಬರಿಗೆ ಭೂ ಖರೀದಿ ವಿಚಾರದಲ್ಲಿ 10 ಕೋಟಿ ರೂ. ವಂಚಿಸಿರುವುದಾಗಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗುವುದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸುವಂತೆ ಈ ಮೊದಲು ಸಿಐಡಿಗೆ ಪತ್ರ ಬರೆಯಲಾಗಿತ್ತು. ಸಿಐಡಿ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನಗೆ ರೋಶನ್ 1 ಕೋ.ರೂ. ವಂಚನೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಉದ್ಯಮಿಯೊಬ್ಬರು ರೂ 5 ಕೋಟಿ ಹಣವನ್ನು ಜು.16ರಂದು ಮತ್ತು ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ ಹಣವನ್ನು ಜು.21ರಂದು ಬ್ಯಾಂಕ್ ಮೂಲಕ ಆರೋಪಿಯ ಖಾತೆಗೆ ವರ್ಗಾಯಿಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಂಧ್ರ ಮೂಲದ ಉದ್ಯಮಿಗೆ 40 ಕೋಟಿ ವಂಚಿಸಿರುವ ಬಗ್ಗೆ ಆರೋಪಿ ವಿರುದ್ಧ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವಿರುದ್ಧ ತನಿಖೆ ಮುಂದುವರಿಸಿರುವ ಪೊಲೀಸರು ಆತನ ಇನ್ನಷ್ಟು ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ. ಈಗಾಗಲೇ 50 ಕೋ.ರೂ. ಹೆಚ್ಚು ವಹಿವಾಟು ನಡೆದಿರುವುದು ಪತ್ತೆಯಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆಸಲಾದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ 200 ಕೋಟಿ ರೂ.ಗೂ ಅಧಿಕ ವಂಚನೆ ನಡೆಸಿದ ಆರೋಪದಲ್ಲಿ ರೋಶನ್ ಸಲ್ಡಾನನನ್ನು ಬಂಧಿಸಲಾಗಿತ್ತು. ಇದೀಗ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿ ಮನೆಯಿಂದ ಪೊಲೀಸರು 667 ಗ್ರಾಂ ಚಿನ್ನಾಭರಣ, 2.75 ಕೋಟಿ ರೂ. ಮೌಲ್ಯದ ವಜ್ರದ ಆಭರಣ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ, ಮಹತ್ವದ ದಾಖಲೆಗಳು ಮತ್ತು ಖಾಲಿ ಚೆಕ್‌ಗಳನ್ನು ವಶಪಡಿಸಿಕೊಂಡಿದ್ದರು.