ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು | ‘ವೋಟ್ ಚೋರಿ’ ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಸಂಸದ ಕ್ಯಾ.ಚೌಟ

Spread the love

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು | ‘ವೋಟ್ ಚೋರಿ’ ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಸಂಸದ ಕ್ಯಾ.ಚೌಟ

ಮಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಫಲಿತಾಂಶವು ಬಿಜೆಪಿಗೆ ಮತ್ತಷ್ಟು ಬಲ ನೀಡಲಿದೆ. ಅಷ್ಟೇಅಲ್ಲ, ಕಾಂಗ್ರೆಸ್ ನಾಯಕರ ಸುಳ್ಳು ವೋಟ್ ಚೋರಿ ಆರೋಪಕ್ಕೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಳಗೊಂಡಿರುವ ಎನ್‌ಡಿಎ ಬಹುಮತ ಸಾಧಿಸಿ ಮತ್ತೆ ಅಧಿಕಾರಕ್ಕೇರಲಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸದರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ವಿಕಸಿತ ಭಾರತದ ಆಡಳಿತ ವೈಖರಿಗೆ ಬಿಹಾರದ ಮತದಾರರು ನೀಡಿರುವ ಜನಾದೇಶ ಬಹುದೊಡ್ಡ ಸಂದೇಶವಾಗಿದೆ. ಕಾಂಗ್ರೆಸ್ ಮತ್ತು ಮಹಾಘಟಬಂಧನ್ ಪಕ್ಷಗಳು ಪದೇ ಪದೇ ‘ವೋಟ್ ಚೋರಿ’ ಎಂಬ ಸುಳ್ಳು ಮತ್ತು ಆಧಾರರಹಿತ ಅಪಪ್ರಚಾರ ಮಾಡಿ ಇಡೀ ಚುನಾವಣಾ ವ್ಯವಸ್ಥೆಯ ಮೇಲೆ ಜನರಿಗೆ ಅಪನಂಬಿಕೆ ಹುಟ್ಟಿಸಲು ಯತ್ನಿಸಿದ್ದವು. ಆದರೆ ಬಿಹಾರದ ಪ್ರಜ್ಞಾವಂತ ಮತದಾರರು ಇಂತಹ ಪ್ರತಿಗಾಮಿ ರಾಜಕಾರಣವನ್ನು ಸಂಪೂರ್ಣವಾಗಿ ತಿರಸ್ಕರಿಸಿ ಮಹಾಘಟಬಂಧನ್‌ನ್ನು ಧೂಳಿಪಟ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಫಲಿತಾಂಶವು ಸುಳ್ಳುಗಳನ್ನು ಹರಡುವ ಕಾಂಗ್ರೆಸ್ ನಾಯಕರಿಗೆ ನೀಡಿದ ಎಚ್ಚರಿಕೆಯಾಗಿದೆ. ಇಡೀ ದೇಶದ ರಾಜಕೀಯ ವ್ಯವಸ್ಥೆಯಲ್ಲೇ ಬಿಹಾರ ಚುನಾವಣಾ ಫಲಿತಾಂಶ ನಿರ್ಣಾಯಕ ಪಾತ್ರ ವಹಿಸಲಿದ್ದು, ಇದರೊಂದಿಗೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ನೆಲಕಚ್ಚುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದ್ದಾರೆ.

ಬಿಹಾರದ ಈ ಅಭೂತಪೂರ್ವ ಗೆಲುವು ಕೇವಲ ಅಲ್ಲಿನ ರಾಜಕೀಯಕಷ್ಟೇ ಸೀಮಿತವಲ್ಲ. ಜತೆಗೆ, ಇದು ದೇಶಾದ್ಯಂತ ಬಿಜೆಪಿಯ ಸಂಘಟನಾತ್ಮಕ ಬಲವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಮುಂಬರುವ ಎಲ್ಲಾ ಚುನಾವಣೆಗಳ ಮೇಲೂ ಬಿಜೆಪಿ ಪಕ್ಷದ ಪಾಲಿಗೆ ಧನಾತ್ಮಕ ಪರಿಣಾಮ ಬೀರಲಿದೆ. ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ದೇಶದ ಪ್ರತಿಯೊಂದು ರಾಜ್ಯವೂ ಅಭಿವೃದ್ಧಿಯ ಪಥದಲ್ಲಿ ಸಾಗಲು ಉತ್ಸುಕವಾಗಿದೆ ಎಂಬುದಕ್ಕೆ ಬಿಹಾರದ ಚುನಾವಣೆ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಇನ್ನಾದರೂ ಕಾಂಗ್ರೆಸ್ ಬುದ್ದಿ ಕಲಿತು ವ್ಯರ್ಥ ಆರೋಪವನ್ನು ನಿಲ್ಲಿಸಲಿ ಎಂದು ಕ್ಯಾ.ಚೌಟ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments