ಬಿ.ಎ. ಮೊಹಿದಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಸೊರಕೆ, ಲೋಬೊ, ಸ್ಪೀಕರ್ ರಮೇಶ್ ಕುಮಾರ್

Spread the love

ಬಿ.ಎ. ಮೊಹಿದಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಸೊರಕೆ, ಲೋಬೊ, ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರ ಬೆಂಗಳೂರಿನ ನಿವಾಸಕ್ಕೆ ಮಾಜಿ ನಗರಾಭಿವೃದ್ಧಿ ಸಚಿವ ಹಾಗೂ ಕಾಪುವಿನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ ಅಂತಿಮ ನಮನವನ್ನು ಸಲ್ಲಿಸಿದರು.

ಅಲ್ಲದೆ ಮಂಗಳೂರು ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ಕೂಡ ಭೇಟಿ ನೀಡಿ ಅಗಲಿದ ಮೊಯ್ದಿನ್ ಅವರಿಗೆ ಅಂತಿಮ ಗೌರವವನ್ನು ಸಲ್ಲಿಸಿದರು.

ವಿಧಾನಸಭೆಯ ಸಭಾಪತಿ ಹಾಗೂ ಬಿ.ಎ. ಮೊಹಿದಿನ್ ಅವರ ಒಡನಾಡಿ ರಮೇಶ್ ಕುಮಾರ್ ಸಹ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೊಹಿದಿನ್ ಅವರ ಬೆಂಗಳೂರಿನ ನಿವಾಸಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ತಮ್ಮ ರಾಜಕೀಯ ಗೆಳೆಯನನ್ನು ನೆನೆದು ದು:ಖತಪ್ತರಾದರು.

ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದಿನ್ (81) ಅವರು ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಪ್ರಾರ್ಥವ ಶರೀರ 11 ಗಂಟೆಯ ಸುಮಾರಿಗೆ ವಿಶೇಷ ಎಸ್ಕಾರ್ಟ್ ವಾಹನದ ಬೆಂಗಾವಲಿನಲ್ಲಿ ಮಂಗಳೂರಿಗೆ ಹೊರಡಲಿದೆ.

ಸಂಜೆ 6 ಗಂಟೆಯ ಸುಮಾರಿಗೆ ಮಂಗಳೂರು ಸಮೀಪದ ಬಜ್ಪೆಯಲ್ಲಿರುವ ಅವರ ಸ್ವಗೃಹಕ್ಕೆ ತಲುಪಲಿದೆ. ಬಳಿಕ ಬಜ್ಪೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Spread the love