ಭ್ರಷ್ಟಾಚಾರ ಆರೋಪ ಹಿನ್ನೆಲೆ ಉಡುಪಿ ಡಿಹೆಚ್ ಒ ವಿರುದ್ಧ ಶಿಸ್ತು ಕ್ರಮಕ್ಕೆ ಯಶ್ಪಾಲ್ ಸುವರ್ಣ ಆಗ್ರಹ

Spread the love

ಭ್ರಷ್ಟಾಚಾರ ಆರೋಪ ಹಿನ್ನೆಲೆ ಉಡುಪಿ ಡಿಹೆಚ್ ಒ ವಿರುದ್ಧ ಶಿಸ್ತು ಕ್ರಮಕ್ಕೆ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ:  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಳೆದ 4 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಜಿ. ಹುಬ್ಬಳ್ಳಿ ಯವರ ಕಾರ್ಯ ವೈಖರಿಯ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಅಧೀನ ವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿಗಳ ಸೇವಾ ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರವೆಸಗುತ್ತಿರುವ ಬಗ್ಗೆ ಮೌಖಿಕ ದೂರುಗಳು ಬರುತ್ತಿವೆ. ಬಿಲ್ ಪಾವತಿ, ಟೆಂಡರ್ ಮತ್ತಿತರ ವಿಷಯಗಳಲ್ಲೂ ನಿಯಮ ಮೀರಿ ಭ್ರಷ್ಟಾಚಾರ ಎಸಗುತ್ತಿರುವ ಬಗ್ಗೆ ಆರೋಪಗಳಿವೆ.

ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಾದ ಡಾ. ಪಿ. ವಿ. ಭಂಡಾರಿ ರವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಭ್ರಷ್ಟಾಚಾರಗಳ ಬಗ್ಗೆ ಗಮನಕ್ಕೆ ತಂದು, ಸದ್ರಿ ಭ್ರಷ್ಟ ಅಧಿಕಾರಿಯ ಬಗ್ಗೆ ತುರ್ತಾಗಿ ಕ್ರಮ ವಹಿಸುವಂತೆ ಕೋರಿರುತ್ತಾರೆ.

ಸಿಬ್ಬಂದಿಗಳ ವರ್ಗಾವಣೆಗೆ ಅರ್ಹರ ಪಟ್ಟಿ ತಯಾರಿಸುವಲ್ಲೂ ಭ್ರಷ್ಟಾಚಾರವೆಸಗಿರುವ ಬಗ್ಗೆ ಆರೋಪಗಳಿವೆ. ಸ್ಥಳೀಯವಾಗಿ ವಿಚಾರಿಸಲಾಗಿ ಮೇಲ್ನೋಟಕ್ಕೆ ಇವರ ಮೇಲಿರುವ ಆರೋಪಗಳು ಸತ್ಯವಾಗಿರುವಂತೆ ಕಂಡು ಬರುತ್ತಿದೆ.

ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಉತ್ತಮ ಸೇವೆಗೆ ಹೆಸರು ಮಾಡಿದ ಉಡುಪಿಯಂತಹ ಮುಂದುವರೆದ ಜಿಲ್ಲೆಯಲ್ಲಿ ಈ ರೀತಿಯ ಕಾರ್ಯ ವೈಖರಿ ಒಪ್ಪಿಕೊಳ್ಳಲು ಸಾಧ್ಯವಿರುವುದಿಲ್ಲ. ತಕ್ಷಣ ಈ ಅಧಿಕಾರಿಯ ವರ್ಗಾವಣೆಗೆ ಕ್ರಮ ಕೈಗೊಂಡು, ಇವರ ಕರ್ತವ್ಯದ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಮತ್ತು ವಿಲೇಗೊಳಿಸಿದ ಕಡತಗಳ ಬಗ್ಗೆ ತನಿಖೆ ನಡೆಸಿ, ಸೂಕ್ತ ಶಿಸ್ತು ಕ್ರಮಕೈಗೊಳ್ಳುವಂತೆ ಪತ್ರ ಬರೆದು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments