ಮಂಗಳೂರಿನಲ್ಲಿ ಮತ್ತೆ ಮಳೆ ಅಬ್ಬರ: ಆಗಸ್ಟ್ 20 ರವರೆಗೂ ಭಾರಿ ಮಳೆ ಮುನ್ಸೂಚನೆ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತಗ್ಗಿದ ಮಳೆ ಮತ್ತೆ ಪ್ರಾರಂಭವಾಗಿದೆ. ಮಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ. ಅಲ್ಲದೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ ಇರುವ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಒಂದು ವಾರ ನೈಋುತ್ಯ ಮಾನ್ಸೂನ್ ಚುರುಕಾಗಲಿದ್ದು, ಕರಾವಳಿ ಸೇರಿದಂತೆ ಒಳನಾಡಿನ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡ, ಬೆಳಗಾವಿ ,ಬೀದರ್, ಕಲಬುರ್ಗಿ, ವಿಜಯಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಆಗಸ್ಟ್ 20 ರವರೆಗೂ ಭಾರಿ ಮಳೆ ಮುನ್ಸೂಚನೆ ಇದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 17ರವರೆಗೆ ಯೆಲ್ಲೋ ಅಲರ್ಟ್ ಇದ್ದು, ನಂತರ ಮಳೆಯ ತೀವ್ರತೆ ಹೆಚ್ಚಾಗುವ ಮುನ್ಸೂಚನೆ ಇದ್ದು, ಆಗಸ್ಟ್ 18, 19 ಹಾಗೂ 20 ರಂದು ಅತಿ ಭಾರಿ ಮಳೆಯ ಆರೆಂಜ್ ಅಲರ್ಟ್ ಕೊಡಲಾಗಿದೆ. ಆಗಸ್ಟ್ 14 ಹಾಗೂ 15 ರಂದು ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗುವ ಅಲರ್ಟ್ ಕೊಡಲಾಗಿದೆ
ಬುಧವಾರ ಕಲಬುರಗಿ ಜಿಲ್ಲೆಯ ಆಳಂದ, ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ತಲಾ 5 ಸೆಂ.ಮೀ., ಉತ್ತರ ಕನ್ನಡ ಜಿಲ್ಲೆಯ ಮಂಕಿ, ಉಡುಪಿ ಜಿಲ್ಲೆಯ ಕುಂದಾಪುರ, ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿ ನಗರ, ಯಾದಗಿರಿ ಜಿಲ್ಲೆಯ ಕುಕ್ಕೇರಿ, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.