ಮಂಗಳೂರಿನ ಶಾಂತಾ ಕೊಲೆ ಪ್ರಕರಣದಲ್ಲಿ ಸೈನೈಡ್​ ಮೋಹನ್​ ಖುಲಾಸೆ| ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್​ ವಿಫಲ

Spread the love

ಮಂಗಳೂರಿನ ಶಾಂತಾ ಕೊಲೆ ಪ್ರಕರಣದಲ್ಲಿ ಸೈನೈಡ್​ ಮೋಹನ್​ ಖುಲಾಸೆ| ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್​ ವಿಫಲ

ಬೆಂಗಳೂರು: ಕುಖ್ಯಾತ ಸರಣಿ ಹಂತಕ ಸೈನೆಡ್​ ಮೋಹನ್​ ಅಲಿಯಾಸ್​ ಮೋಹನ್​ ಕುಮಾರ್​ನನ್ನು 2006ರಲ್ಲಿ ಕೊಲ್ಲೂರಿನಲ್ಲಿ ನಡೆದ ಶಾಂತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್​ ಎತ್ತಿಹಿಡಿದಿದೆ.

ಖುಲಾಸೆ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರದ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಎಚ್​.ಪಿ. ಸಂದೇಶ್​ ಮತ್ತು ಬಿ. ಪ್ರಮೋದ್​ ಅವರಿದ್ದ ವಿಭಾಗೀಯ ನ್ಯಾಯಪೀಠ, ಆರೋಪಿ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿಯನ್ನು ಜೋಡಿಸಲು ಪ್ರಾಸಿಕ್ಯೂಷನ್​ ವಿಫಲವಾಗಿದೆ. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ನಿಂತಿರುವ ಪ್ರಕರಣದಲ್ಲಿ ಸಂಶಯದ ಲಾಭವನ್ನು ಆರೋಪಿಗೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್​ ತೀರ್ಪೊಂದನ್ನು ಉಲ್ಲೇಖಿಸಿ, ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ಲೋಪವಿಲ್ಲ ಎಂದು ಹೇಳಿದೆ.

ಪ್ರಾಸಿಕ್ಯೂಷನ್​ ಆರೋಪದ ಪ್ರಕಾರ, ಮಂಗಳೂರಿನ ಕಂಕನಾಡಿ ಸಮೀಪದ ಶಾಂತಾ ಎಂಬ ಮಹಿಳೆಗೆ ತನ್ನನ್ನು ರಾಜೇಶ್​ ಎಂಬ ನಕಲಿ ಹೆಸರಿನಲ್ಲಿ ಮೋಹನ್​ ಪರಿಚಯ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು 2006ರ ನ.9ರಂದು ಕೊಲ್ಲೂರಿಗೆ ಕರೆದೊಯ್ದಿದ್ದ. ಅಲ್ಲಿ ಗೆಸ್ಟ್​ಹೌಸ್​ನಲ್ಲಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಚಿನ್ನಾಭರಣಗಳನ್ನು ಕೊಠಡಿಯಲ್ಲಿಯೇ ಬಿಡುವಂತೆ ಹೇಳಿ ಕೊಲ್ಲೂರು ದೇವಸ್ಥಾನದ ಹಿಂಭಾಗದ ಸ್ವರ್ಣಮುಖಿ ಮಂಟಪದ ಬಳಿಗೆ ಕರೆದೊಯ್ದು, ಗರ್ಭಪಾತದ ಮಾತ್ರೆ ಎಂದು ನಂಬಿಸಿ ಸೈನೆಡ್​ ನೀಡಿದ್ದ. ಆಕೆ ಮೃತಪಟ್ಟ ಬಳಿಕ ಕೊಠಡಿಗೆ ಮರಳಿ ಆಕೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.

ಮಹಿಳೆಯ ಮೃತದೇಹ ದೇವಸ್ಥಾನದ ಸಮೀಪ ಪತ್ತೆಯಾಗಿತ್ತು. ಮರಣೋತ್ತರ ಪರೀೆ ನಡೆಸಿದ ವೈದ್ಯರು ಸೈನೆಡ್​ ವಿಷಪ್ರಾಶನದ ಸಾಧ್ಯತೆ ಬಗ್ಗೆ ವರದಿ ನೀಡಿದ್ದರು. ಆ ನಂತರ ಶವವನ್ನು ಹೂಳಲಾಗಿತ್ತು. ಆಕೆಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. 2009ರಲ್ಲಿ ಪ್ರತ್ಯೇಕ ಪ್ರಕರಣವೊಂದರಲ್ಲಿ ಮೋಹನ್​ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ 2006ರ ಶಾಂತಾ ಕೊಲೆ ಪ್ರಕರಣದಲ್ಲೂ ಆತನ ಪಾತ್ರವಿರುವುದು ಬೆಳಕಿಗೆ ಬಂದಿತ್ತು ಎಂದು ಪ್ರಾಸಿಕ್ಯೂಷನ್​ ತಿಳಿಸಿತ್ತು.

ಇದಾದ ನಂತರ ಮರುತನಿಖೆಗಾಗಿ ಶವ ಹೊರತೆಗೆದು ಮತ್ತೆ ವಿಧಿವಿಜ್ಞಾನ ಪರೀೆಗೆ ಒಳಪಡಿಸಲಾಯಿತು. ಆದರೆ, ಮೃತದೇಹವು ಸಂಪೂರ್ಣ ಕೊಳೆತುಹೋಗಿದ್ದ ಕಾರಣ ಸೈನೆಡ್​ ಸೇವನೆಯಿಂದಲೇ ಸಾವು ಸಂಭವಿಸಿದೆ ಎಂದು ಖಚಿತವಾಗಿ ಸಾಬೀತುಪಡಿಸಲು ಸಾದ್ಯವಾಗಿರಲಿಲ್ಲ. ಅಲ್ಲದೆ, ಆರೋಪಿಯು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದಕ್ಕೆ ಪ್ರಾಸಿಕ್ಯೂಷನ್​ ಯಾವುದೇ ಆಧಾರ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.


Spread the love
Subscribe
Notify of

0 Comments