ಮಂಗಳೂರು| ಅನೈತಿಕ ಪೊಲೀಸ್‌ಗಿರಿ ಪ್ರಕರಣ: ಆರು ಮಂದಿ ಸೆರೆ
ಮಂಗಳೂರು: ನಗರದಲ್ಲಿ ಅನೈತಿಕ ಪೊಲೀಸ್‌ಗಿರಿ ಎಸಗಿದ ಆರೋಪದ ಮೇರೆಗೆ ಪಾಂಡೇಶ್ವರ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಗಣೇಶ್, ಶ್ರೇಯಸ್, ಚಿಂಚು, ಚಂದನ್, ನಾಗರಾಜ್ ಹಾಗು ರಾಮಚಂದ್ರ ಎಂದು ಗುರುತಿಸಲಾಗಿದೆ.
ಆ.11ರಂದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಮತ್ತು ಯುವಕನೊಬ್ಬ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ತಡೆದು ಅಡ್ಡಿಪಡಿಸಿ ಜೀವಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಪ.ಪೂ. ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿಯಾಗಿರುವ ಬಾಲಕಿ ತಾನು ಕಾಲೇಜು ಮುಗಿಸಿ ಸರ್ವಿಸ್ ಬಸ್ ನಿಲ್ದಾಣದಿಂದ ತನ್ನ ಗೆಳತಿಯ ಸಂಬಂಧಿ ಯುವಕನೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದಾಗ 7ರಿಂದ 8 ಮಂದಿ ಅಪರಿಚಿತರು ಅಡ್ಡಗಟ್ಟಿ ಅವನೊಂದಿಗೆ ಯಾಕೆ ಹೋಗುತ್ತಿದ್ದೀಯಾ, ಏನು ಮಾತನಾಡುತ್ತಿದ್ದೀಯಾ? ಎಂದು ಕೇಳಿ ಜೀವಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.