ಮಂಗಳೂರು| ಕೆಎಸ್‌ಆರ್‌ಟಿಸಿ ನೌಕರರ ಬಂದ್: ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ
ಮಂಗಳೂರು: ವೇತನ ಪರಿಷ್ಕರಣೆ, ಬಾಕಿ ಎರಿಯರ್ ಪಾವತಿ ಬೇಡಿಕೆ ಮುಂದಿಟ್ಟು ಮಂಗಳವಾರದಂದು ಕರೆ ನೀಡಲಾಗಿರುವ ಕೆಎಸ್‌ಆರ್‌ಟಿಸಿ ನೌಕರರ ಬಂದ್‌ಗೆ ಮಂಗಳೂರು ವಿಭಾಗದಲ್ಲಿಯೂ ಸ್ಪಂದನೆ ದೊರೆಯಲಿದೆ ಎಂದು ಕಾರ್ಮಿಕ ಮುಖಂಡರು ಹೇಳಿದ್ದಾರೆ. ಆದರೆ ಹೆಚ್ಚಿನ ಪರಿಣಾಮವಾಗದು ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮಂಗಳವಾರಕ್ಕೆ ದೂರದ ಊರುಗಳ ಪ್ರಯಾಣದ ಬುಕ್ಕಿಂಗ್ ತುಂಬಾ ಕಡಿಮೆಯಾಗಿದೆ. ಸೋಮವಾರ ಸಾಮಾನ್ಯ ದಿನಗಳಂತೆಯೇ ಪ್ರಯಾಣವಿತ್ತು. ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಎಲ್ಲ ಬಸ್‌ಗಳು ಸಂಚರಿಸಿವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾರ್ಮಿಕರು ಮುಷ್ಕರ ನಡೆಸುವ ಸಾಧ್ಯತೆ ಕಡಿಮೆ. ಮುಷ್ಕರ ನಡೆಸಿದರೆ ಕಾರ್ಮಿಕರ ಮೇಲೆ ಶಿಸ್ತು ಕ್ರಮ ಜರಗುವ ಸಾಧ್ಯತೆ ಇರುತ್ತವೆ. ಈ ಕುರಿತೂ ನೌಕರರಿಗೆ ತಿಳಿ ಹೇಳಿ ಮನವೊಲಿಸಲು ಪ್ರಯತ್ನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ವಿಭಾಗದಲ್ಲಿ ಸುಮಾರು 1,900 ಮಂದಿ ನೌಕರರಿದ್ದಾರೆ. ಅವರೆಲ್ಲರಿಗೂ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸಂಘಟನೆಯ ಕೇಂದ್ರ ಕಚೇರಿಯಿಂದ ಸೂಚನೆ ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಸಿಬಂದಿ ಮತ್ತು ಕಾರ್ಮಿಕರ ಸಂಘ ಮಂಗಳೂರು ವಿಭಾಗದ ಅಧ್ಯಕ್ಷ ಪ್ರವೀಣ್ ಪ್ರತಿಕ್ರಿಯಿಸಿದ್ದಾರೆ.
ಮುಷ್ಕರದ ಬಗ್ಗೆ ಮಾಹಿತಿ ಇದ್ದಿರಬಹುದೇನೋ ಬಸ್ಸು ನಿಲ್ದಾಣದಲ್ಲಿ ಸೋಮವಾರ ರಾತ್ರಿ ಕೆಲವರಷ್ಟೆ ಪ್ರಯಾಣಿಸುತ್ತಿರುವುದು ಕಂಡು ಬಂದಿತು. ಮುಷ್ಕರದ ಬಗ್ಗೆ ರಾತ್ರಿಯೂ ಕೆಲವು ಪ್ರಯಾಣಿಕರು ಮಂಗಳೂರು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳನ್ನು ವಿಚಾರಿಸುತ್ತಿದ್ದರು. ಆದರೆ ಅಧಿಕಾರಿಗಳು ತಮಗೆ ಸರಿಯಾದ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದರು.