ಮಂಗಳೂರು ದಸರಾ ಮಹೋತ್ಸವಕ್ಕೆ ಸ್ಪೀಕರ್ ಯು.ಟಿ. ಖಾದರ್ ಚಾಲನೆ
ಮಂಗಳೂರು: ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆದ ಮಂಗಳೂರು ದಸರಾ – 2025 ಕಾರ್ಯಕ್ರಮಗಳಿಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರು ಮಾತನಾಡಿ, “ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ನನ್ನನ್ನು ರಾಜಕೀಯ ಅಂಗಳಕ್ಕೆ ಕರೆತಂದು ಕೇಂದ್ರ ಸಚಿವನಾಗುವ ಅವಕಾಶ ನೀಡಿದರು. ಕುದ್ರೋಳಿ ಕ್ಷೇತ್ರದ ನವೀಕರಣದ ಬಳಿಕ ದಿವಂಗತ ಇಂದಿರಾ ಗಾಂಧಿಯವರೇ ಈ ದೇವಸ್ಥಾನವನ್ನು ಉದ್ಘಾಟಿಸಿದ್ದರು. ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ಕೊಡುಗೆಯನ್ನೂ ನಾವು ಮರೆಯಬಾರದು” ಎಂದು ಸ್ಮರಿಸಿದರು.
ಚಾಲನೆ ನೀಡಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ “ಮಂಗಳೂರು ದಸರಾ ಜಿಲ್ಲೆಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಮಹೋತ್ಸವವಾಗಿದೆ. ನಾನು ಬಾಲ್ಯದಿಂದಲೇ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆದ ಕುದ್ರೋಳಿಯ ಕೆಲಸಗಳನ್ನು ಗಮನಿಸಿದ್ದೇನೆ. ಶ್ರೀ ಕ್ಷೇತ್ರವು ಸೌಹಾರ್ದ ಹಾಗೂ ಸಹಬಾಳ್ವೆಯ ಸಂದೇಶವನ್ನು ನೀಡುವ ವೇದಿಕೆ. ಎಲ್ಲಾ ಜಾತಿ-ಧರ್ಮದ ಜನರು ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವೂ ಹೌದು. ನಾವು ಎಲ್ಲರೂ ಭಾರತೀಯರು, ನಾವು ಒಂದೇ ಎಂಬ ಮನೋಭಾವನೆ ಬೆಳೆದರೆ ಸಮಾಜದ ಸಾಮೂಹಿಕ ಅಭಿವೃದ್ಧಿ ಸಾಧ್ಯ.” ಎಂದು ಹೇಳಿದರು
ಧಾರ್ಮಿಕ ದತ್ತಿ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು. ದಿನೇಶ್ ಗುಂಡೂರಾವ್ ಮಾತನಾಡುತ್ತಾ, “ಮೈಸೂರು ದಸರಾ ನಂತರ ರಾಜ್ಯದ ಜನರನ್ನು ಆಕರ್ಷಿಸುವ ದಸರಾ ಎಂದರೆ ಅದು ಮಂಗಳೂರಿನದು. ಜನಾರ್ದನ ಪೂಜಾರಿಯವರ ಶ್ರಮದಿಂದ ಈ ಉತ್ಸವ ನಾಡಹಬ್ಬವಾಗಿ ಬೆಳಗುತ್ತಿದೆ. ಧಾರ್ಮಿಕ ಚಟುವಟಿಕೆಗಳು ನಮ್ಮ ಬದುಕಿನ ಅಂಗ. ಮುಂದಿನ ವರ್ಷದಿಂದ ಮಂಗಳೂರು ದಸರಾ ಉತ್ಸವಕ್ಕೂ ಸರ್ಕಾರದ ಅನುದಾನ ಒದಗಿಸಲು ಪ್ರಯತ್ನ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು.
ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರು ಮಂಜುನಾಥ ಭಂಡಾರಿ, ಐವನ್ ಡಿ’ಸೋಜ, ಮುಖ್ಯ ಸಚೇತಕ ಅಶೋಕ್ ದೇವಪ್ಪ ಪಟ್ಟಣ್, ಗಡಿನಾಡ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಕುದ್ರೋಳಿ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಆಡಳಿತ ಸಮಿತಿಯ ಖಜಾಂಚಿ ಆರ್. ಪದ್ಮರಾಜ್ ಸ್ವಾಗತಿಸಿ, ಸ್ಮಿತೇಶ್ ಎಸ್. ಬಾರ್ಯ ನಿರೂಪಣೆ ನಡೆಸಿದರು.
ಮಂಗಳೂರು ದಸರಾ ಸನ್ಮಾನ – 2025 ರ ಅಂಗವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ತುಕಾರಾಮ ಪೂಜಾರಿ, ಲೇಡಿ ಗೋಶನ್ ಆಸ್ಪತ್ರೆಗೆ ಸಂಬಂಧಿಸಿದ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಎಂ.ಆರ್ ಹಾಗೂ ಮೂಕ ಪ್ರಾಣಿಗಳನ್ನು ಸಾಕುವ ತ್ಯಾಗಮಯಿ ಶಾಲೆಟ್ ಅವರನ್ನು “ಅಸಮಾನ್ಯಸ್ತ್ರೀ ಗೌರವ” ಪ್ರಶಸ್ತಿಯಿಂದ ಸನ್ಮಾನಿಸಲಾಯಿತು.