ಮಂಗಳೂರು| ನಂತೂರ್ ಬಳಿ ರಸ್ತೆ ಅಪಘಾತ: ಕೇರಳ ಮೂಲದ ವೈದ್ಯ ಮೃತ್ಯು

Spread the love

ಮಂಗಳೂರು| ನಂತೂರ್ ಬಳಿ ರಸ್ತೆ ಅಪಘಾತ: ಕೇರಳ ಮೂಲದ ವೈದ್ಯ ಮೃತ್ಯು

ಮಂಗಳೂರು: ನಗರದ ನಂತೂರಿನ ತಾರೆತೋಟ ಬಳಿ ಸೋಮವಾರ ರಾತ್ರಿ ಕಾರೊಂದು ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ, ಸ್ಕಿಡ್ ಆಗಿ ಡಿವೈಡರ್ ಬಡಿದು ಸಂಭವಿಸಿದ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಫಿಸಿಯೋಥೆರಪಿ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೂಲತಃ ಕೇರಳದ ಆಲಪ್ಪುಝ ನಿವಾಸಿ ಡಾ.ಮುಹಮ್ಮದ್ ಅಮಲ್ (29) ಮೃತಪಟ್ಟವರು ಎಂದು ತಿಳಿದು ಬಂದಿದೆ.

ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮುಗಿಸಿ ಅಲ್ಲಿಯೇ ಡ್ಯೂಟಿಗೆ ಸೇರಿದ್ದ ಡಾ.ಮುಹಮ್ಮದ್ ಅಮಲ್ ನಿನ್ನೆ ರಾತ್ರಿ 11:45ರ ಸುಮಾರಿಗೆ ಇವರು ತನ್ನ ಗೆಳತಿ, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಜೊತೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಡಾ.ಮುಹಮ್ಮದ್ ಅಮಲ್ ನಂತೂರಿನಿಂದ ಪಂಪ್‌ವೆಲ್ ಕಡೆಗೆ ತನ್ನ ಕಾರನ್ನು ಚಲಾಯಿಸಿಕೊಂಡು ತೆರಳುತ್ತಿದ್ದಾಗ, ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ನಿಯಂತ್ರಣ ತಪ್ಪಿದ್ದು, ಅತಿ ವೇಗದಿಂದಾಗಿ ಡಿವೈಡರ್‌ಗೆ ಬಡಿದು ಕಾರು ಪಲ್ಟಿಯಾಗಿದೆ. ಕಾರು ಚಲಾಯಿಸುತ್ತಿದ್ದ ಡಾ.ಮುಹಮ್ಮದ್ ಅಮಲ್ ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ , ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇವರ ಜೊತೆಗಿದ್ದ ವಿದ್ಯಾರ್ಥಿನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಡಿವೈಡರ್‌ಗೆ ಬಡಿದು ಮಗುಚಿ ಬಿದ್ದಾಗ ಹಿಂದಿನಿಂದ ಬರುತ್ತಿದ್ದ ಸರಕು ತುಂಬಿದ್ದ ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮವಾಗಿ ಲಾರಿ ಸ್ಕಿಡ್ ಆಗಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಇದರಿಂದಾಗಿ ನಂತೂರು-ಪಂಪ್‌ವೆಲ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ, ಟ್ರಾಫಿಕ್ ಜಾಮ್ ಆಗಿತ್ತು ಎಂದು ತಿಳಿದು ಬಂದಿದೆ.


Spread the love