ಮಂಗಳೂರು| ಪೊಲೀಸ್ ಕಾರ್ಯಾಚರಣೆಯ ವೀಡಿಯೋ ಶೇರ್ ಮಾಡಿದ ಆರೋಪ: ಪ್ರಕರಣ ದಾಖಲು
ಮಂಗಳೂರು: ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸ್ ಕಾರ್ಯಾಚರಣೆಯ ವೀಡಿಯೋ ಶೇರ್ ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಹಮ್ಮದ್ ನವಾಝ್ ಎಂಬಾತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯವು ಹೊರಡಿಸಿದ್ದ ಬಂಧನ ವಾರೆಂಟ್ ಇತ್ತು. ಆತ ತಲೆಮರೆಸಿಕೊಂಡಿದ್ದ ಕಾರಣ ನ್ಯಾಯಾಲಯದ ಆದೇಶದಂತೆ ಉಳ್ಳಾಲ ಠಾಣೆ ಯಲ್ಲಿ ವಾರೆಂಟ್ ಕರ್ತವ್ಯ ನಿರ್ವಹಿಸುವ ಎಚ್‌ಸಿ ವೇಣುಗೋಪಾಲ ಮತ್ತು ಠಾಣಾ ಅಪರಾಧ ಪತ್ತೆ ವಿಭಾಗದ ಪಿಸಿ ಹಡಪದ ಮಂಜುನಾಥ ಹಾಗೂ ಪಿಸಿ ಆನಂದ ಬಾಡಗಿ, ಠಾಣೆಯ ಮಹಿಳಾ ಪಿಸಿ ಪೂರ್ಣಿಮಾ ಕುಂದರಗಿ ವಾರೆಂಟ್ ಆರೋಪಿ ಮುಹಮ್ಮದ್ ನವಾಝ್‌ನನ್ನು ಪತ್ತೆ ಹಚ್ಚಿ ಕರೆದುಕೊಂಡು ಬರುತ್ತಿರುವಾಗ ಆ ಮನೆಯಲ್ಲಿದ್ದ ಮಹಿಳೆ ಯೊಬ್ಬರು ವಾರೆಂಟ್, ಎಂತ ವಾರೆಂಟ್, ನಮಗೆ ತೋರಿಸಿ ನೀವು, ವಾರೆಂಟ್ ಎಂತದ್ದು ತೋರಿಸಿ, ನಿಮ್ಮ ಮೇಲೆ ಕಂಪ್ಲೇಂಟ್ ಮಾಡುತ್ತೇವೆ ಈಗ ನಮ್ಮ ವಕೀಲರಿಗೆ ಹೇಳುತ್ತೇವೆ ಎಂಬುದಾಗಿ ಹೇಳಿರುವುದು ಕಂಡು ಬಂದಿದೆ ಎಂದು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿರುವ ಪೊಲೀಸ್ ಕಾನ್‌ಸ್ಟೇಬಲ್ ಸಂದೀಪ್ ದೂರಿನಲ್ಲಿ ತಿಳಿಸಿದ್ದಾರೆ.
ನಿಯಮಾನುಸಾರ ಆರೋಪಿಯನ್ನು ಬಂಧಿಸಿ ಕರೆದೊಯ್ಯುವಾಗ ಸರಕಾರಿ ಕರ್ತವ್ಯ ನಿರ್ವಹಿಸುವ ಪೊಲೀಸರನ್ನು ಹೆದರಿಸುವ ಉದ್ದೇಶದಿಂದ ಮೊಬೈಲ್‌ನಲ್ಲಿ ವೀಡಿಯೋ ಮಾಡಿ ಯಾವುದೇ ಬಂಧನದ ವಾರೆಂಟ್ ಇಲ್ಲದೆ, ನವಾಝ್ ನನ್ನು ಉಳ್ಳಾಲ ಠಾಣೆಯ ಭ್ರಷ್ಟ ಪೊಲೀಸರು ಎಳೆದುಕೊಂಡು ಹೋಗುತ್ತಿರುವ ದೃಶ್ಯ, ದಯವಿಟ್ಟು ಶೇರ್ ಮಾಡಿ ಎಂಬುದಾಗಿ ಸುಳ್ಳು ಸುದ್ದಿಯನ್ನು ಬರೆದು ಜುಬೇದಾ ಎಂಬಾಕೆ ವಾಟ್ಸ್‌ಆ್ಯಪ್ ಮೂಲಕ ಶೇರ್ ಮಾಡಿದ್ದಾರೆ. ಅದನ್ನು ಅಪ್ಪು ಮುನ್ನ, ಆಯಿಶ್ ಎಂಬವರು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಪೊಲೀಸ್ ಕಾನ್‌ಸ್ಟೇಬಲ್ ಸಂದೀಪ್ ರೈ ದೂರು ನೀಡಿದ್ದಾರೆ. ಅದರಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.