ಮಂಗಳೂರು ಮ್ಯಾರಥಾನ್ 2025: ನ.9ರಂದು ಬೆಳಿಗ್ಗೆ ನಗರದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆಗಳು

Spread the love

ಮಂಗಳೂರು ಮ್ಯಾರಥಾನ್ 2025: ನ.9ರಂದು ಬೆಳಿಗ್ಗೆ ನಗರದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆಗಳು

ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ಆಯೋಜನೆಯಾದ “ಮಂಗಳೂರು ಮ್ಯಾರಥಾನ್ 2025” ಭಾನುವಾರ, ನವೆಂಬರ್ 9ರಂದು ಬೆಳಿಗ್ಗೆ 4 ಗಂಟೆಯಿಂದ 10 ಗಂಟೆಯವರೆಗೆ ನಗರದ ವಿವಿಧ ಭಾಗಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ 6000 ಕ್ಕೂ ಅಧಿಕ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

ಮ್ಯಾರಥಾನ್ ಮಂಗಳಾ ಕ್ರೀಡಾಂಗಣದಿಂದ ಆರಂಭಗೊಂಡು ನಾರಾಯಣಗುರು ವೃತ್ತ – ಕೊಟ್ಟಾರ ಚೌಕಿ – ಕುದುರೆಮುಖ ಜಂಕ್ಷನ್ – ತಣ್ಣೀರುಬಾವಿ ಫೆರಿ – NMPA ಸರ್ವಿಸ್ ರಸ್ತೆ – ಡಿಕ್ಸಿ ಕ್ರಾಸ್ – ಪಣಂಬೂರು ಬೀಚ್ – ಪಣಂಬೂರು ಜಂಕ್ಷನ್ ಮಾರ್ಗವಾಗಿ ಮತ್ತೆ ಮಂಗಳಾ ಸ್ಟೇಡಿಯಂನಲ್ಲಿ ಅಂತ್ಯಗೊಳ್ಳಲಿದೆ.

ಮ್ಯಾರಥಾನ್ ಸಂದರ್ಭದಲ್ಲಿ ಮೇಲ್ಕಂಡ ರಸ್ತೆಗಳ ಮೇಲೆ ವಾಹನ ಸಂಚಾರ ನಿಧಾನಗತಿಯಾಗುವ ಸಾಧ್ಯತೆಗಳಿದ್ದು, ಸ್ಪರ್ಧೆ ನಡೆಯುವ ಮುಖ್ಯ ಮಾರ್ಗಗಳಿಗೆ ಸಂಪರ್ಕಿಸುವ ಅಡ್ಡರಸ್ತೆಗಳಲ್ಲಿ ಕೆಲಕಾಲ ವಾಹನಗಳನ್ನು ನಿಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕ್ರೀಡಾಪಟುಗಳ ಸುರಕ್ಷತೆಗಾಗಿ ಸಾರ್ವಜನಿಕರು ಸಹಕಾರ ನೀಡುವಂತೆ ವಿನಂತಿಸಲಾಗಿದೆ.

ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳು:

  • ಪಿ.ವಿ.ಎಸ್‌ ಕಡೆಯಿಂದ ನಾರಾಯಣಗುರು ವೃತ್ತ (ಲೇಡಿಹಿಲ್) ಕಡೆಗೆ ಹೋಗುವ ವಾಹನಗಳು ಲಾಲ್ಬಾಗ್ – ಕೆ.ಎಸ್.ಆರ್.ಟಿ.ಸಿ – ಕುಂಟಿಕಾನ ಮಾರ್ಗವಾಗಿ ಸಂಚರಿಸಬಹುದು.
  • ಕುದ್ರೋಳಿ, ಮಣ್ಣಗುಡ್ಡೆ ಮತ್ತು ಉರ್ವ ಮಾರ್ಕೆಟ್ ಪ್ರದೇಶಗಳಿಂದ ನಾರಾಯಣಗುರು ವೃತ್ತ ಕಡೆಗೆ ಹೋಗುವ ವಾಹನಗಳು ಮಣ್ಣಗುಡ್ಡೆ – ಬಲ್ಲಾಳ್ಬಾಗ್/ನೆಹರೂ ಅವೆನ್ಯೂ ರಸ್ತೆ – ಲಾಲ್ಬಾಗ್ – ಕೆ.ಎಸ್.ಆರ್.ಟಿ.ಸಿ – ಕುಂಟಿಕಾನ ಮಾರ್ಗವನ್ನು ಬಳಸಬಹುದು.
  • ಕೆ.ಎಸ್.ಆರ್.ಟಿ.ಸಿ ನಿಲ್ದಾಣದಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಬಿಜೈ – ಕಾಪಿಕಾಡ್ ಮೂಲಕ ಕುಂಟಿಕಾನ ಮಾರ್ಗವಾಗಿ ಸಂಚರಿಸಬೇಕು.
  • ಆಶೋಕನಗರ, ಶೇಡಿಗುರಿ, ದಂಬೇಲ್, ಸುಲ್ತಾನ್ ಬತ್ತೇರಿ ಪ್ರದೇಶಗಳಿಂದ ಬರುವ ವಾಹನಗಳು ಉರ್ವ ಮಾರ್ಕೆಟ್ – ಮಣ್ಣಗುಡ್ಡೆ ಮುಖಾಂತರ ಸಾಗಬಹುದು.
  • ಕೊಟ್ಟಾರಚೌಕಿ ಜಂಕ್ಷನ್‌ನಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಕೋಡಿಕಲ್ ಕ್ರಾಸ್‌ವರೆಗೆ ಉಡುಪಿ–ಮಂಗಳೂರು ಹೆದ್ದಾರಿಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವಿದೆ.

ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಹಕರಿಸುವಂತೆ ಹಾಗೂ ವಾಹನ ಚಾಲಕರು ನೀಡಿರುವ ಬದಲಿ ಮಾರ್ಗಗಳನ್ನು ಪಾಲಿಸುವಂತೆ ವಿನಂತಿಸಿದೆ.


Spread the love
Subscribe
Notify of

0 Comments
Inline Feedbacks
View all comments