ಮಂಗಳೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ : ಭೂಮಿ ಕಳೆದುಕೊಳ್ಳುವವರಿಗೆ ಉದ್ಯೋಗ ವಸತಿಗೆ ಐವನ್‌ ಡಿಸೋಜಾ ಒತ್ತಾಯ

Spread the love

ಮಂಗಳೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ : ಭೂಮಿ ಕಳೆದುಕೊಳ್ಳುವವರಿಗೆ ಉದ್ಯೋಗ ವಸತಿಗೆ ಐವನ್‌ ಡಿಸೋಜಾ ಒತ್ತಾಯ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯನ್ನು 150 ಮೀ. ವಿಸ್ತರಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ 32.97 ಎಕರೆ ಜಾಗ ಒದಗಿಸುವಂತೆ ರಾಜ್ಯ ಸರಕಾರಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಮನವಿ ಮಾಡಿದೆ. ವಿಮಾನ ನಿಲ್ದಾಣದಿಂದ ರಾಜ್ಯ ಸರಕಾರಕ್ಕೆ ಯಾವುದೇ ಪಾಲು ಸಿಗದ ಹಿನ್ನೆಲೆ ಪ್ರಾಧಿಕಾರ ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಅದಾನಿ ಕಂಪೆನಿ ಭೂ ಸ್ವಾಧೀನ ವೆಚ್ಚವನ್ನು ಭರಿಸಬೇಕು ಎಂದು ಸರಕಾರ ತಿಳಿಸಿದ್ದು, ಪ್ರಾಧಿಕಾರ ಅದಾ ಸಂಸ್ಥೆಗೆ ಭೂ ಸ್ವಾಧೀನ ವೆಚ್ಚ ಭರಿಸಲು ತಿಳಿಸಿದೆ. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ, ಉದ್ಯೋಗ ಹಾಗೂ ವಸತಿ ವ್ಯವಸ್ಥೆಯನ್ನುಕಂಪೆನಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಮಂಗಳೂರಿನ ಪಾಲಿಕೆಯ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ರನ್ವೇ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದು ರನ್ ವೇ ವಿಸ್ತರಣೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸರಕಾರ ಪತ್ರ ಬರೆದು ಮನವಿ ಮಾಡಿದೆ ಎಂಬ ಉತ್ತರ ಲಭಿಸಿದೆ ಎಂದರು.

ರಾಜ್ಯದ ಎರಡನೇ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದರೂ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮರ್ಪಕ ಬೆಳಕಿನ ಕೊರತೆ ಇದೆ. ಪ್ರತಿಕೂಲ ಹವಾಮಾನ ಇದ್ದಲ್ಲಿ ವಿಮಾನಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಗಾತ್ರದ ಬೋಯಿಂಗ್ ವಿಮಾನಗಳು ಮಂಗಳೂರಿಗೆ ಆಗಮಿಸುತ್ತಿಲ್ಲ. ಈ ಸಮಸ್ಯೆಗೆ ಪ್ರಾಧಿಕಾರ ಹಾಗೂ ಕಂಪೆನಿ ಪರಿಹಾರ ಕೈಗೊಳ್ಳಬೇಕು ಎಂದರು.

ಮಂಗಳೂರು ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿರುವ ಕಾರಣದಿಂದ ವಿವಿಧ ಸಮಸ್ಯೆಗಳಾಗುತ್ತಿದ್ದು, ಹಿಂದಿನ ಬೇಡಿಕೆಯಂತೆ ಪಡುಬಿದ್ರೆ, ಪಲಿಮಾರು ಭಾಗದಲ್ಲಿರುವ ಸರಕಾರಿ ಜಾಗದಲ್ಲಿ ಉಭಯ ಜಿಲ್ಲೆಗೆ ಆನುಕೂಲವಾಗುವಂತೆ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯವಿದೆ. ಇದಕ್ಕಾಗಿ ಉಭಯ ಜಿಲ್ಲೆಯ ಸಂಸದರು ಕೇಂದ್ರಕ್ಕೆ ಒತ್ತಡ ಹಾಕಬೇಕಿದೆ ಎಂದರು.


Spread the love
Subscribe
Notify of

0 Comments
Inline Feedbacks
View all comments