ಮಂಗಳೂರು| ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರಕರಣ ದಾಖಲು

Spread the love

ಮಂಗಳೂರು| ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರಕರಣ ದಾಖಲು

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿ ವ್ಯಕ್ತಿಯೊಬ್ಬ ಟ್ರಾಫಿಕ್‌ನಲ್ಲಿ ಕರ್ತವ್ಯನಿರತ ಹೆಡ್‌ಕಾನ್‌ ಸ್ಟೇಬಲ್‌ರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಟೇಟ್‌ಬ್ಯಾಂಕ್ ವೃತ್ತದ ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಟ್ರಾಫಿಕ್ ಎಚ್‌ಸಿ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಸ್ಕೂಟರ್ ಸವಾರ ನಾಟೆಕಲ್‌ನ ಆಸಿಫ್ ಬಾವ ಎಂಬಾತ ಅದನ್ನು ಲೆಕ್ಕಿಸದೆ ಸ್ಕೂಟರ್ ಚಲಾಯಿಸಿದ್ದು, ಈ ಸಂದರ್ಭ ಎಚ್‌ಸಿ ಸ್ಕೂಟರ್ ಸವಾರನಿಗೆ ಏಯ್ ಅಂತ ಹೇಳಿ ಕೈಯಿಂದ ಸವರಿದ್ದಾರೆ. ಇದರಿಂದ ಆಕ್ರೋಶಗೊಂಡ ಆಸಿಫ್ ಬಾವ ಟ್ರಾಫಿಕ್ ಎಚ್‌ಸಿ ಜೊತೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಜೊತೆ ವಾಗ್ವಾದ ನಡೆಸುತ್ತಿರುವುದನ್ನು ಸಾರ್ವಜನಿಕರೊಬ್ಬರು ವೀಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಈ ವೀಡಿಯೋವನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಕೂಟರ್ ಸವಾರನು ಟ್ರಾಫಿಕ್ ಪೊಲೀಸ್‌ ರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸ್ಪಷ್ಟವಾಗಿದೆ. ಆ ಹಿನ್ನಲೆಯಲ್ಲಿ ಸ್ಕೂಟರ್ ಸವಾರನ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ನಿಂದನೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ಅದರಂತೆ ಆರೋಪಿಯ ವಿರುದ್ಧ ನಗರ ಉತ್ತರ ಸಂಚಾರ ಠಾಣೆಯಲ್ಲಿ ಬಿಎನ್‌ಎಸ್ ಕಾಯಿದೆ 281 (ದುಡುಕುತನ ಚಾಲನೆ) 221 (ಕರ್ತವ್ಯಕ್ಕೆ ಅಡ್ಡಿ), 352 (ಅವಾಚ್ಯ ನಿಂದನೆ) ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love