ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ
ಬೆಂಗಳೂರು, ಅಕ್ಟೋಬರ್ 28: 2025-26ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಹಂತದ ವಿದ್ಯಾರ್ಥಿಗಳ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು ಇಂದು ವಿಕಾಸ ಸೌಧ ಉದ್ಘಾಟಿಸಿದರು.

ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳ ನಂತರ ಆಯ್ಕೆಯಾದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸರ್ಕಾರ ಮತ್ತು ಖಾಸಗಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಸಂಸತ್ ಕಾರ್ಯವೈಖರಿಯನ್ನು ಅನುಕರಿಸಿ ಚರ್ಚೆಗಳಲ್ಲಿ ತಮ್ಮ ವಾದನ ಕೌಶಲ್ಯವನ್ನು ಪ್ರದರ್ಶಿಸಿದರು.
ದಿನಪೂರ್ತಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಉತ್ಸಾಹ ಹಾಗೂ ವಿಚಾರಪೂರ್ಣ ಚರ್ಚೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಂತಿಮವಾಗಿ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆಮಾಡಲಾಗಿದ್ದು, ಇವರು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಹೇಳಿದರು,
“ನಾನು ಸಾಕಷ್ಟು ಚುನಾವಣೆಗಳನ್ನು ಎದುರಿಸಿದ್ದೇನೆ, ಬಹುತೇಕಲ್ಲಿ ಸೋತಿದ್ದೇನೆ. ಆದರೆ ಸೋಲು ಜೀವನದಲ್ಲಿ ಪಾಠ ಕಲಿಸುತ್ತದೆ. ಯುವಕರು ರಾಜಕೀಯದಲ್ಲಿ ಆಸಕ್ತಿ ತೋರಬೇಕು. ಈ ರೀತಿಯ ಸ್ಪರ್ಧೆಗಳು ನಿಮ್ಮ ಚರ್ಚಾ ಮನೋಭಾವ ಮತ್ತು ಭವಿಷ್ಯಕ್ಕೆ ಸಹಕಾರಿಯಾಗುತ್ತದೆ,” ಎಂದರು.
ಮಕ್ಕಳ ಸೇವೆಯಿಂದ ದೊರೆತ ತೃಪ್ತಿ ಮತ್ತು ಸಮಾಧಾನವೇ ನನಗೆ ದೊಡ್ಡ ಪ್ರಶಸ್ತಿ ಎಂದು ಸಚಿವರು ಹೇಳಿದರು.
“ಮಕ್ಕಳು ದೇವರ ಸಮಾನ, ಅವರ ಸೇವೆ ಮಾಡುವುದೇ ನಮ್ಮ ಭಾಗ್ಯ. ರಾಜಕಾರಣದಲ್ಲಿ ಟೀಕೆ-ಟಿಪ್ಪಣಿಗಳನ್ನು ಸ್ವೀಕರಿಸುವ ಮನೋಭಾವ ಬೆಳಸಿಕೊಳ್ಳಬೇಕು,” ಎಂದರು.
ಅವರು SSLC ಹಾಗೂ PUC ಉತ್ತೀರ್ಣತೆಗೆ ಅಗತ್ಯ ಅಂಕಗಳನ್ನು 35ರಿಂದ 33ಕ್ಕೆ ಇಳಿಸಿರುವುದು ಮತ್ತು ಮೂರು ಪರೀಕ್ಷಾ ನೀತಿಯು ವಿಶೇಷವಾಗಿ ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಸಾಮಾಜಿಕ ಜಾಲತಾಣದಿಂದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸದೆ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ಚರ್ಚಾ ಕೌಶಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಸಚಿವರು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸರ್ಕಾರದ ಮೂರು ಪರೀಕ್ಷಾ ನೀತಿ ಹಾಗೂ ಉತ್ತೀರ್ಣಕ್ಕೆ 33 ಅಂಕ ನಿಗದಿಯ ನೀತಿಗಳಿಗೆ ಸಚಿವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ವ್ಯಕ್ತಪಡಿಸಿ, ಶಿಕ್ಷಣ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಸಂವಾದಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಶ್ರೀ ಭರತ್ ಎಸ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.












