ಮಹಾತ್ಮಗಾಂಧಿ ಹೆಸರು ಅಳಿಸುವುದು ಘೋರ ಅಪರಾಧ: ಮಾಜಿ ಸಚಿವ ರಮಾನಾಥ ರೈ
ಮಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡಿ ಹೆಸರು ಅಳಿಸುತ್ತಿರುವುದು ಘೋರ ಅಪರಾಧವಾಗಿದ್ದು, ಕೇಂದ್ರ ಸರಕಾರದ ಈ ನಡೆಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಖಂಡಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುಪಿಎ ಆಡಳಿತಾವಧಿಯಲ್ಲಿ ನೀಡಲಾದ ಮಹತ್ತರ ಯೋಜನೆ ಇದಾಗಿದ್ದು, ಜಗತ್ತು ಈ ಕಾರ್ಯಕ್ರಮವನ್ನು ಮೆಚ್ಚಿದೆ ಎಂದರು.
ಈ ಯೋಜನೆ ಮಂಡಿಸಲಾದ ಸಂದರ್ಭ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಭ್ರಷ್ಟಾಚಾರ ಕಾರ್ಯಕ್ರಮ ಎಂದು ಹೇಳಿದ್ದವು. ಮಹಾತ್ಮಗಾಂಧಿ ಹೆಸರಿನಲ್ಲಿ ಜಾರಿಗೆ ಬಂದಿದ್ದ ಈ ಯೋಜನೆ ಸಮಾಜದ ಬಡ, ರೈತ, ಕಾರ್ಮಿಕ ವರ್ಗಕ್ಕೆ ಮನರೇಗಾ ಕಾರ್ಯಕ್ರಮದಿಂದ ಅನುಕೂಲವಾಗಿದೆ. ಇದೀಗ ಮಹಾತ್ಮ ಗಾಂಧಿ ಹೆಸರನ್ನು ಕೈಬಿಡುವ ಮೂಲಕ ಅವಮಾನ ಮಾಡಲಾಗಿದೆ. ಈಗಾಗಲೇ ಮಹಾತ್ಮಗಾಂಧಿ ವಿರುದ್ಧ ಸಂಘ ಪರಿವಾರದ ಶಕ್ತಿಗಳಿಂದ ನಡೆಯುತ್ತಿರುವ ಮಹಾತ್ಮಗಾಂಧಿ ವಿರುದ್ಧದ ಅವಹೇಳನದ ಭಾಗ ಇದಾಗಿದೆ ಎಂದು ಅವರು ಆರೋಪಿಸಿದರು.
ಹಿಂದೆ ಈ ಯೋಜನೆಯಡಿ ವೇತನವನ್ನು ಕೇಂದ್ರ ಸರಕಾರದಿಂದ ಪಾವತಿಸಲಾಗುತ್ತಿತ್ತು. ಈಗ ಕೇಂದ್ರ ಶೇ.60, ರಾಜ್ಯ ಶೇ.40 ಪಾಲು ಎಂದು ಹೇಳಿರುವುದು ಈ ಯೋಜನೆಯ ಗಾಂಧೀಜಿ ಹೆಸರು ಬದಲಾವಣೆಯ ಜತೆಗೆ ಯೋಜನೆಯನ್ನು ದುರ್ಬಲಗೊಳಿಸುವ ಯತ್ನವೂ ನಡೆದಿದೆ. ಗಾಂಧೀಜಿ ಬಗೆಗಿನ ಬಿಜೆಪಿ ಧೋರಣೆ ಏನೆಂಬುದು ಇದರಿಂದ ಸ್ಪಷ್ಟವಾಗಿದೆ. ಇತಿಹಾಸವನ್ನು ತಿದ್ದುವ ಕೆಲಸ ಬಿಜೆಪಿಯಿಂದ ನಡೆಯುತ್ತಿದ್ದು, ದೇಶಕ್ಕಾಗಿ ತ್ಯಾಗ ಮಾಡಿದವರನ್ನು, ಇತಿಹಾಸದ ಪುಟಗಳಿಂದ ಅಳಿಸುವ ಕಾರ್ಯ ನಡೆಯುತ್ತಿದೆ. ಪ್ರಪಂಚದ 80 ದೇಶಗಳಲ್ಲಿ ಗಾಂಧೀಜಿ ಪ್ರತಿಮೆ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಪ್ರಧಾನಿ ಮೋದಿಯವರು ಬೇರೆ ದೇಶಕ್ಕೆ ಹೋದಾಗ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಆದರೆ ದೇಶದಲ್ಲಿ ಅವರ ಹೆಸರನ್ನೇ ಅಳಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.













