ಮಾಜಿ ಸಚಿವ ಖಮರುಲ್‌ ಇಸ್ಲಾಂ ನಿಧನ

Spread the love

ಮಾಜಿ ಸಚಿವ ಖಮರುಲ್‌ ಇಸ್ಲಾಂ ನಿಧನ

ಬೆಂಗಳೂರು: ಮಾಜಿ ಸಚಿವ ಹಾಗೂ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಖಮರುಲ್ ಇಸ್ಲಾಂ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊದಲ ಮೂರು ವರ್ಷ ಪೌರಾಡಳಿತ ಸಚಿವರಾಗಿದ್ದ ಖಮರುಲ್ ಅವರು, ಒಂದು ವರ್ಷದ ಹಿಂದೆ ನಡೆದ ಸಚಿವ ಸಂಪುಟ ಪುನರ್‌ ರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡಿದ್ದರು.

1974 ರಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಖಮರುಲ್ ಇಸ್ಲಾಂ, ಮೊದಲ ಬಾರಿಯೇ ಮುಸ್ಲಿಂ ಲೀಗ್ ಪಕ್ಷದಿಂದ ಆಯ್ಕೆಯಾಗಿದ್ದರು. ಮೂರು ಬಾರಿ ಮುಸ್ಲಿಂ ಲೀಗ ಮತ್ತೆ ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಸೇರಿ ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1999 ರಲ್ಲಿ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಮೊದಲ ಬಾರಿ ಸಚಿವರಾಗಿದ್ದ ಖಮರುಲ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೂರು ವರ್ಷ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಬಳಿಕ ಅವರನ್ನು ಕೇರಳ ಕಾಂಗ್ರೆಸ್ ಉಸ್ತುವಾರಿ ಹಾಗೂ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.

ಕೃಷ್ಣ ಸಂಪುಟದಲ್ಲಿ ಕಾರ್ಮಿಕ, ವಸತಿ ಖಾತೆ ನಿರ್ವಹಿಸಿದ್ದ ಅವರು ಸಿದ್ದು ಸಂಪುಟದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ವಕ್ಫ್ ಖಾತೆ ಸಚಿವರಾಗಿದ್ದರು.


Spread the love