ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ಶೇಣಿ ಪ್ರಶಸ್ತಿ
ಯಕ್ಷಗಾನದ ಭೀಷ್ಮ, ಹರಿದಾಸ ಡಾ.ಶೇಣಿ ಗೋಪಾಲಕೃಷ್ಣ ಭಟ್ ಅವರ ಹೆಸರಿನಲ್ಲಿ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್ ನೀಡುವ 2025ರ ಸಾಲಿನ ಶೇಣಿ ಪ್ರಶಸ್ತಿಗೆ ಹಿರಿಯ ತಾಳಮದ್ದಳೆ ಅರ್ಥದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 25ರಂದು ಸಂಜೆ 5 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ, ಪ್ರಸ್ತುತ ದೇವಸ್ಥಾನದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಶಸ್ತಿಯು 30 ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರವನ್ನು ಒಳಗೊಂಡಿದೆ.
ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಪ್ರಜ್ವಲನೆ ಮಾಡಲಿದ್ದು, ಕಸಪಾ ಮಾಜಿ ಅಧ್ಯಕ್ಷ, ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡುವರು. ಹಿರಿಯ ಲೆಕ್ಕಪರಿಶೋಧಕ ಸಿ.ಎ.ಶ್ಯಾಮ ಭಟ್, ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಮಂಗಳೂರಿನ ಉದ್ಯಮಿ ಶಿವಪ್ರಸಾದ ಪ್ರಭು ಅತಿಥಿಗಳಾಗಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 3.30ರಿಂದ ಹರಿದಾಸ ಮಂಜುಳಾ ಜಿ.ರಾವ್ ಇರಾ ಅವರಿಂದ ಹರಿಕಥೆ ಇರಲಿದೆ.
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳ ಪರಿಚಯ
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ಬಂಟ್ವಾಳ ತಾಲೂಕಿನ ಮೂಡಂಬೈಲಿನ ಹೆಸರಾಂತ ಚಕ್ರಕೋಡಿ ಮನೆತನದಲ್ಲಿ 1936ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಶಾಸ್ತ್ರ, ಪುರಾಣ, ಸಂಪ್ರದಾಯ ಮತ್ತು ಯಕ್ಷಗಾನಗಳತ್ತ ಆಸಕ್ತಿ ವಹಿಸಿ ಅಭ್ಯಾಸ ಮಾಡಿದವರು. ಯಕ್ಷಗಾನ ಅವರ ಹವ್ಯಾಸಿ ಕ್ಷೇತ್ರ. ವೃತ್ತಿಪರರಿಗೆ ಕಡಿಮೆಯಾಗದಂತೆ ಪಾತ್ರನಿರ್ವಹಿಸಬಲ್ಲ ಮೂಡಂಬೈಲು, ದೊಡ್ಡ ಮಟ್ಟಿನ ಕೂಟಗಳಲ್ಲಿ ಅನಿವಾರ್ಯ ಕಲಾವಿದರಾಗಿಯೇ ಗುರುತಿಸಿಕೊಂಡವರು. ಆರಂಭ ಕಾಲದಲ್ಲಿ ಭಾಗವತಿಕೆ ಮಾಡುತ್ತಿದ್ದ ಅವರು, ನಂತರದ ದಿನಗಳಲ್ಲಿ ಅರ್ಥದಾರಿಯಾಗಿ ರೂಪುಗೊಂಡರು. ವಿಶೇಷವಾಗಿ ಇವರು ಗುರುತಿಸಿಕೊಂಡದ್ದು ಕೈಕೈ, ಅಂಬೆ, ದ್ರೌಪದಿ, ತಾರೆ, ಸೀತೆ, ಮಂಡೋದರಿ, ಕಯಾದು ಮೊದಲಾದ ಸ್ತ್ರೀಪಾತ್ರಗಳಿಂದ. ರಾಮ, ಕೃಷ್ಣ, ಧರ್ಮರಾಯ, ಪರಶುರಾಮ, ತಾಮ್ರಧ್ವಜ, ಇಂದ್ರಜಿತು, ಭೀಷ್ಮ, ಲಕ್ಷ್ಮಣ, ಅರ್ಜುನ ಇವರಿಗೆ ಹೆಸರು ತಂದುಕೊಟ್ಟ ಇತರ ಕೆಲವು ಪಾತ್ರಗಳು.
ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಸಾಮಗದ್ವಯರು, ಪೆರ್ಲ ಕೃಷ್ಣ ಭಟ್, ವಿದ್ವಾನ್ ಕಾಂತ ರೈ, ತೆಕ್ಕಟ್ಟೆ ಆನಂದ ಮಾಸ್ಟರ್, ಕುಂಬ್ಳೆ ಸುಂದರ ರಾವ್, ಕೋಳ್ಯೂರು ರಾಮಚಂದ್ರ ರಾವ್, ಸೂರಿಕುಮೇರು ಗೋವಿಂದ ಭಟ್, ಉಡುವೆಕೋಡಿ ಸುಬ್ಬಪ್ಪಯ್ಯ, ಡಾ.ಎಂ.ಪ್ರಭಾಕರ ಜೋಶಿ ಮೊದಲಾದ ಹಿರಿಯ ಕಲಾವಿದರೊಂದಿಗೆ ತಾಳಮದ್ದಲೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದ್ದಾರೆ. ಬೆಂಗಳೂರಿನಿಂದ ಕಾಸರಗೋಡಿನವರೆಗೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿ ನಿವೃತ್ತರು. 89ರ ಇಳಿವಯಸ್ಸಿನಲ್ಲಿರುವ ಶ್ರೀಯುತರು ಸದ್ಯ ಬೆಳ್ತಂಗಡಿಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.













